ಗುರುವಾರ , ಏಪ್ರಿಲ್ 22, 2021
22 °C

ಕೊಬ್ರಾ ಕಮಾಂಡೊ ಅಧಿಕಾರಿ ನಾಪತ್ತೆ: ಎಲ್ಲ ಕಡೆ ಶೋಧ –ಛತ್ತೀಸ್‌ಗಡ ಪೊಲೀಸ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ರಾಯ್‌ಪುರ: ಮೂರು ದಿನಗಳ ಹಿಂದೆ ಬಸ್ತಾರ್ ಪ್ರದೇಶದಲ್ಲಿ ಮಾವೊವಾದಿ ಉಗ್ರರೊಂದಿಗೆ ನಡೆದ ಸಂಘರ್ಷದ ನಂತರ ನಾಪತ್ತೆಯಾಗಿರುವ ಕೊಬ್ರಾ ಕಮಾಂಡೊ ಅಧಿಕಾರಿಯ ಪತ್ತೆಗಾಗಿ ಪೊಲೀಸರು ಎಲ್ಲ ದಿಕ್ಕುಗಳಿಂದಲೂ ಪ್ರಯತ್ನ ಮುಂದುವರಿಸಿದ್ದಾರೆ.

ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಯ ಗಡಿಭಾಗದಲ್ಲಿ ಶನಿವಾರ ಮಾವೊವಾದಿಗಳೊಂದಿಗೆ ನಡೆದ ಗುಂಡಿನ ಚಕಮಕಿಯ ನಂತರ ಕೊಬ್ರಾದ(ಕಮಾಂಡೊ ಬೆಟಾಲಿಯನ್ ಫಾರ್ ರೆಸೊಲ್ಯುಟ್ ಆಕ್ಷನ್) 210ನೇ ಬೆಟಾಲಿಯನ್‌ ಅಧಿಕಾರಿ ರಾಕೇಶ್ವರ್‌ ಸಿಂಗ್ ಮನ್ಹಾಸ್ ನಾಪತ್ತೆಯಾಗಿದ್ದರು. ಘಟನೆಯಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, 31 ಮಂದಿ ಗಾಯಗೊಂಡಿದ್ದರು.

‘ಕೊಬ್ರಾ ಕಮಾಂಡೊ ಅಧಿಕಾರಿಯನ್ನು ನಾವೇ ಅಪಹರಿಸಿದ್ದೇವೆ. ಅವರೀಗ ನಮ್ಮ ವಶದಲ್ಲಿದ್ದಾರೆ. ಅವರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ‘ ಎಂದು ಸುಕ್ಮಾ ಜಿಲ್ಲೆಯ ಪತ್ರಕರ್ತರೊಬ್ಬರಿಗೆ ಮಾವೊವಾದಿಗಳು ದೂರವಾಣಿ ಕರೆ ಮಾಡಿ ತಿಳಿಸಿದ್ದರು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಎರಡು ದಿನಗಳಿಂದ ಘಟನೆ ನಡೆದ ಸುತ್ತಲಿನ ಪ್ರದೇಶದಲ್ಲಿ ಶೋಧಕಾರ್ಯವನ್ನು ತೀವ್ರಗೊಳಿಸಿದ್ದರು.

‘ನಾಪತ್ತೆಯಾಗಿರುವ ಅಧಿಕಾರಿ ನಕ್ಸಲ್ ವಶದಲ್ಲೇ ಇದ್ದಾರೆ ಎಂದು ಇಲ್ಲಿವರೆಗೆ ಯಾರೂ ಖಚಿತಪಡಿಸಿಲ್ಲ. ಪೊಲೀಸ್ ಅಧಿಕಾರಿಯನ್ನು ಅಪಹರಿಸಿರುವ ಕುರಿತು ಮಾವೊವಾದಿಗಳು ಅಧಿಕೃತ ಹೇಳಿಕೆಯನ್ನಾಗಲಿ, ವಶದಲ್ಲಿದ್ದಾರೆಂದು ಹೇಳುವ ಅಧಿಕಾರಿಯ ಪೋಟೊವನ್ನಾಗಲಿ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಆದರೆ, ನಾವು ಎಲ್ಲ ರೀತಿಯಿಂದಲೂ ಅಧಿಕಾರಿಯ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ‘ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್‌ ರಾಜ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಬಸ್ತಾರ್‌ ಪ್ರದೇಶದ ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಪ್ರಕಾರ, ‘ಘಟನೆ ನಡೆದ ದಿನದಿಂದ ಗುಂಡಿನ ಚಕಮಕಿ ನಡೆದಿದ್ದ ಜಾಗದ ಸುತ್ತಮುತ್ತಲಿನ ಪ್ರದೇಶಗಳನ್ನೆಲ್ಲ ಎರಡು ದಿನಗಳಿಂದ ಜಾಲಾಡಿದ್ದೇವೆ. ಎಲ್ಲೂ ಅವರ ಸುಳಿವು ಸಿಕ್ಕಿಲ್ಲ. ಅವರು ನಕ್ಸಲ್ ವಶದಲ್ಲೇ ಇರಬೇಕು‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು