ಮಂಗಳವಾರ, ಜನವರಿ 18, 2022
16 °C

ವಾಸಯೋಗ್ಯ ಪ್ರಮಾಣಪತ್ರ ಪಡೆಯುವುದು ಕಟ್ಟಡ ನಿರ್ಮಾಣಗಾರರ ಹೊಣೆ: ಸುಪ್ರೀಂ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ವಾಸಯೋಗ್ಯ ಪ್ರಮಾಣಪತ್ರವನ್ನು ಪಡೆಯಲು ಕಟ್ಟಡ ನಿರ್ಮಾಣಗಾರರು ವಿಫಲವಾದರೆ,1 986ರ ಗ್ರಾಹಕ ಸಂರಕ್ಷಣೆ ಕಾಯ್ದೆಯಂತೆ ಅವರು ತಮ್ಮ ಸೇವೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದೇ ಪರಿಗಣಿತವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ವಾಸಯೋಗ್ಯ ಪ್ರಮಾಣಪತ್ರ ದೊರಕದ ಕಾರಣ ವಸತಿ ಖರೀದಿದಾರರು ಹೆಚ್ಚುವರಿ ತೆರಿಗೆ, ನೀರಿನ ಶುಲ್ಕ ಪಾವತಿಸಬೇಕಾಗಿ ಬಂದರೆ ಆ ಹೆಚ್ಚುವರಿ ವೆಚ್ಚವನ್ನು ಭರಿಸುವುದೂ ಕಟ್ಟಡ ನಿರ್ಮಾಣಗಾರನ ಹೊಣೆ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ಎ.ಎಸ್‌.ಬೋಪಣ್ಣ ಅವರಿದ್ದ ಪೀಠವು ಹೇಳಿದೆ.

ಕಟ್ಟಡ ನಿರ್ಮಾಣಗಾರನ ವೈಫಲ್ಯದಿಂದಾಗಿ ನಗರಸಭೆಗೆ ಪಾವತಿಸಿದ ಅಧಿಕ ಶುಲ್ಕವನ್ನು ವಾಪಸ್‌ ನೀಡಬೇಕು ಎಂಬ ಕುರಿತಂತೆ ಸಹಕಾರ ವಸತಿ ಸಂಘವೊಂದರ ದೂರು ವಜಾ ಮಾಡಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಸಂಘದ ಅರ್ಜಿಯನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ವೇದಿಕೆ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಂಘ ಮೇಲ್ಮನವಿ ಸಲ್ಲಿಸಿತ್ತು.

‘ಇದು, ಸಹಜವಾದ ತೆರಿಗೆ ಸಂಗ್ರಹ ಪ್ರಕ್ರಿಯೆ. ಗ್ರಾಹಕ ವ್ಯಾಜ್ಯವಲ್ಲ’ ಎಂದು ಅರ್ಜಿಯ ವಜಾಗೊಳಿಸುವಾಗ ಗ್ರಾಹಕ ವ್ಯಾಜ್ಯ ವೇದಿಕೆಯು ತಿಳಿಸಿತ್ತು. ‘ಕಟ್ಟಡ ನಿರ್ಮಾಣಗಾರರು ಅಗತ್ಯ ಪ್ರಮಾಣಪತ್ರ ಪಡೆಯಲು ವಿಫಲರಾಗಿದ್ದಾರೆ. ಹೀಗಾಗಿ, ವಸತಿ ಮಾಲೀಕರು ವಿದ್ಯುತ್ ಮತ್ತು ನೀರು ಶುಲ್ಕ ಪಡೆಯಲಾಗುತ್ತಿಲ್ಲ’ ಎಂದು ಸಂಘ ದೂರು ಸಲ್ಲಿಸಿತ್ತು.

ಗ್ರಾಹಕ ವ್ಯಾಜ್ಯ ವೇದಿಕೆಯ ಆದೇಶವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ಅರ್ಜಿದಾರರು ಈ ಸಂಬಂಧ ಅಧಿಕ ಶುಲ್ಕ ವಿಧಿಸುತ್ತಿರುವ ಸಂಬಂಧಿತ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು ಎಂದು ತಿಳಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು