ಸೋಮವಾರ, ಜೂನ್ 27, 2022
28 °C

ವಿಚ್ಛೇದನಕ್ಕಾಗಿ ನಪುಂಸಕತ್ವದ ಸುಳ್ಳು ಆರೋಪ ಕ್ರೌರ್ಯ: ಕೇರಳ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ವಿಚ್ಛೇದನ ಪ್ರಕರಣದಲ್ಲಿ ಸಂಗಾತಿಯ ಮೇಲೆ ನಪುಂಸಕತ್ವ ಅಥವಾ ಲೈಂಗಿಕ ನಿಶ್ಶಕ್ತಿಯ ಸುಳ್ಳು ಆರೋಪ ಹೊರಿಸುವುದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್ ಹೇಳಿದೆ. 

ನ್ಯಾಯಮೂರ್ತಿಗಳಾದ ಎ. ಮುಹಮ್ಮದ್‌ ಮುಸ್ತಾಕ್ ಮತ್ತು ಕೌಸರ್‌ ಎಡಪ್ಪಗತ್ತ್‌ ಅವರ ಪೀಠವು ವೈದ್ಯ ದಂಪತಿಯ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿ ಈ ಅಭಿಪ್ರಾಯ ವ್ಯಕ್ತ‍ಪಡಿಸಿದೆ. ವೈದ್ಯ ದಂಪತಿಗೆ ವಿಚ್ಛೇದನಕ್ಕೆ ಅವಕಾಶ ನೀಡಲಾಗಿದೆ. 

ಅನಗತ್ಯ ಆರೋಪಗಳನ್ನು ಮಾಡುವುದು ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ತಮ್ಮ ಗಂಡ ನಪುಂಸಕ ಎಂದು ಮಹಿಳೆಯು ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಪುಷ್ಟೀಕರಿಸಲು ಅವರು ವಿಫಲರಾಗಿದ್ದಾರೆ. ಗಂಡನಿಗೆ ಲೈಂಗಿಕ ನಿಶ್ಶಕ್ತಿ ಇದೆ ಎಂಬುದನ್ನು ಸಾಬೀತು ಮಾಡುವ ಯಾವುದೇ ದಾಖಲೆಯನ್ನು ಮಹಿಳೆಯು ಸಲ್ಲಿಸಿಲ್ಲ. ಮಹಿಳೆಯ ಆರೋಪವು ತಪ್ಪು ಎಂದು ಸಾಬೀತು ಮಾಡುವುದಕ್ಕಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಲು ಗಂಡ ಸಿದ್ಧವಿದ್ದರು. ಆದರೆ, ಹೆಂಡತಿ  ಅವಕಾಶವನ್ನು ಬಳಸಿಕೊಂಡಿಲ್ಲ ಎಂದು ನ್ಯಾಯಾಲಯವು ಹೇಳಿದೆ. 

2008ರಲ್ಲಿ ಮದುವೆಯಾಗಿದ್ದ ಇವರು, ಒಂದು ವಾರ ಒಟ್ಟಿಗಿದ್ದ ಬಳಿಕ ವ್ಯಾಸಂಗಕ್ಕಾಗಿ ಬೇರೆ ಬೇರೆ ಸ್ಥಳಕ್ಕೆ ತೆರಳಿದ್ದರು. ಗಂಡ ಕೊಚ್ಚಿಯ ಆಸ್ಪತ್ರೆಯಲ್ಲಿ 2010ರಲ್ಲಿ ಕೆಲಸಕ್ಕೆ ಸೇರಿದ್ದರು. ಆಗಿನಿಂದ ಎರಡು ವರ್ಷ ಅವರು ಜತೆಗಿದ್ದರು. ಹೆಂಡತಿ ಔಷಧ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿದ್ದ ಗಂಡ ಆಕೆಯನ್ನು ಮನಶ್ಶಾಸ್ತ್ರಜ್ಞರ ಬಳಿಗೆ ಕರೆದುಕೊಂಡು ಹೋಗಿದ್ದರು.

ಹೆಂಡತಿಗೆ ಭ್ರಾಂತಿಯ ಸಮಸ್ಯೆ ಇದೆ ಎಂಬ ಕಾರಣ ಕೊಟ್ಟು ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಗಂಡನಿಗೆ ಲೈಂಗಿಕ ಸಾಮರ್ಥ್ಯ ಇಲ್ಲ ಎಂದು ಹೆಂಡತಿ ಪ್ರತಿವಾದ ಮಂಡಿಸಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ನೀಡಿರಲಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು