ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ; ಉದ್ಧವ್ ಠಾಕ್ರೆ‌ ಸರ್ಕಾರದ ಮೇಲೆ ಬಿಜೆಪಿ ಆಕ್ರೋಶ

ರೈತರ ಪ್ರತಿಭಟನೆ: ದೇಶದ ಪರ ಟ್ವೀಟ್‌ ಮಾಡಿದ ಗಣ್ಯರ ವಿರುದ್ಧ ತನಿಖೆಗೆ ಆದೇಶಿಸಿದ ಆರೋಪ
Last Updated 2 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಮುಂಬೈ: ‘ಭಾರತದ ಪರವಾಗಿ’ ಟ್ವೀಟ್ ಮಾಡಿದ ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್ ಅವರಂತಹ ಗಣ್ಯರ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಮುಂದಾಗಿದೆ ಎಂದು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ವಿಧಾನಸಭೆಯಲ್ಲಿ ಮಂಗಳವಾರ ಆರೋಪಿಸಿದ್ದಾರೆ. ದೆಹಲಿಯಲ್ಲಿ ರೈತರ ಪ್ರತಿಭಟನೆಯ ಕುರಿತು ವಿದೇಶಗಳ ಖ್ಯಾತನಾಮರು ದನಿಯೆತ್ತಲು ಶುರು ಮಾಡಿದ ಮೇಲೆ ಭಾರತದಲ್ಲೂ ಕೆಲವು ಪ್ರಮುಖರು ದೇಶದ ಪರವಾಗಿ ಟ್ವೀಟ್ ಮಾಡಿದ್ದರು.

ಫಡಣವೀಸ್ ಆರೋಪವನ್ನು ಅಲ್ಲಗಳೆದ ಗೃಹಸಚಿವ ಅನಿಲ್ ದೇಶ್‌ಮುಖ್, ‘ಬಿಜೆಪಿ ಐಟಿ ಘಟಕದ ಟ್ವೀಟ್‌ಗಳನ್ನು ತನಿಖೆ ಮಾಡಲು ಸೂಚಿಸಲಾಗಿದೆಯೇ ಹೊರತು ತೆಂಡೂಲ್ಕರ್ ಅಥವಾ ಲತಾ ಮಂಗೇಶ್ಕರ್ ಅವರ ಟ್ವೀಟ್‌ಗಳನ್ನಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡುವಂತೆ ಕೆಲವು ಪ್ರಸಿದ್ಧ ವ್ಯಕ್ತಿಗಳ ಮೇಲೆ ಒತ್ತಡ ಹೇರಲಾಗಿದೆ ಎಂಬ ಆರೋಪದ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ತನಿಖೆ ನಡೆಸಲಿದೆ ಎಂದು ಫೆಬ್ರುವರಿ 8 ರಂದು ದೇಶಮುಖ್ ಹೇಳಿದ್ದರು. ಖ್ಯಾತನಾಮರ ಟ್ವೀಟ್‌ಗೂ ಬಿಜೆಪಿಗೂ ನಂಟು ಇದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು.

ತೆಂಡೂಲ್ಕರ್, ಲತಾ ಮಂಗೇಶ್ಕರ್ ಸೇರಿದಂತೆ ಕೆಲವು ಗಣ್ಯರು ‘#ಇಂಡಿಯಾ ಟುಗೆದರ್‘, ‘#ಇಂಡಿಯಾ ಅಗೇನ್‌ಸ್ಟ್‌ ಪ್ರೊಪಗಾಂಡ’ ಎಂಬ ಹ್ಯಾಷ್‌‌ಟ್ಯಾಗ್‌ನಡಿ ಟ್ವೀಟ್ ಮಾಡಿದ್ದರು. ಪಾಪ್‌ತಾರೆ ರಿಯಾನಾ ಹಾಗೂ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ ಅವರು ರೈತರ ವಿಚಾರವನ್ನು ಟ್ವಿಟರ್‌ನಲ್ಲಿ ಪ್ರಸ್ತಾಪಿಸಿದ ಬಳಿಕ ಇಲ್ಲಿನ ಕೆಲವು ಪ್ರಮುಖರು ಭಾರತದ ಪರವಾಗಿ ಟ್ವೀಟ್ ಮಾಡಿದ್ದರು.

‘ಭಾರತ ಒಗ್ಗಟ್ಟಾಗಿದೆ’ ಎಂದು ಗಣ್ಯರು ಟ್ವೀಟ್ ಮಾಡುವುದು ತಪ್ಪೇ? ಇದು ತಪ್ಪು ಎಂದು ಯಾರಾದರೂ ದೂರು ನೀಡಿದಲ್ಲಿ ಗೃಹಸಚಿವರು ಒಮ್ಮೆ ಯೋಚಿಸಿ ತನಿಖೆಗೆ ಆದೇಶಿಸಬೇಕಲ್ಲವೇ’ ಎಂದು ಫಡಣವೀಸ್ ಹರಿಹಾಯ್ದಿದ್ದಾರೆ.

‘ಬಿಜೆಪಿ ಐಟಿ ಘಟಕದ ಟ್ವೀಟ್‌ಗಳ ಬಗ್ಗೆ ತನಿಖೆ ನಡೆಸಿದಾಗ 12 ವ್ಯಕ್ತಿಗಳ ಜೊತೆ ಪ್ರಕರಣಕ್ಕೆ ಸಂಬಂಧವಿದೆ ಎಂಬುದು ತಿಳಿದುಬಂದಿದೆ. ಇವರ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ದೇಶ್‌ಮುಖ್ ಹೇಳಿದರು.

ಪ್ರತಿಕ್ರಿಯಿಸಿದ ಫಡಣವೀಸ್, ‘ಒಂದು ವೇಳೆ, ಟ್ವೀಟ್ ಮಾಡುವಂತೆ ಗಣ್ಯರಿಗೆ ನಾನು ಹೇಳಿದ್ದೇನೆ ಎಂದು ಅಂದುಕೊಳ್ಳಿ. ನಾನು ಮಾಡಿದ್ದರಲ್ಲಿ ತಪ್ಪೇನಿದೆ. ದೇಶದ ಪರವಾಗಿ ನಿಲ್ಲುವಂತೆ ಕೇಳಿಕೊಳ್ಳುವುದು ಅಪರಾಧವೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT