ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ಮುಂದುವರಿಸಿದ ರೈತರು

ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ಮುಂದುವರಿಸಿದ ರೈತರು
Last Updated 29 ನವೆಂಬರ್ 2020, 21:13 IST
ಅಕ್ಷರ ಗಾತ್ರ

ಚಂಡೀಗಡ: ಕೇಂದ್ರ ಸರ್ಕಾರದ ಷರತ್ತಿನಂತೆ ದೆಹಲಿಯ ಬುರಾಡಿ ಮೈದಾನಕ್ಕೆ ತೆರಳಲು ನಿರಾಕರಿಸಿರುವ ರೈತರು, ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸದಿದ್ದರೆ, ದೆಹಲಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡುವುದಾಗಿ ರೈತರು ಬೆದರಿಕೆ ಹಾಕಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ಈಗ ಐದನೇ ದಿನವನ್ನು ಪೂರೈಸಿದೆ. ದೆಹಲಿ ಗಡಿಯನ್ನು ಮೊದಲು ತಲುಪಿದ್ದ ರೈತರ ಮೊದಲ ತಂಡವನ್ನು ಬುರಾಡಿ ಮೈದಾನಕ್ಕೆ ಕಳುಹಿಸಲಾಗಿದೆ. ಅವರನ್ನು ಮೈದಾನದಲ್ಲೇ ಬಂಧನದಲ್ಲಿ ಇರಿಸಲಾಗಿದೆ. ಹೀಗಾಗಿ ಬೇರೆ ರೈತರು ಈ ಮೈದಾನಕ್ಕೆ ಹೋಗಲು ನಿರಾಕರಿಸಿದ್ದಾರೆ.

ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಸಾವಿರಾರು ರೈತರು ಈಗಾಗಲೇ ಸೇರಿದ್ದಾರೆ. ಹರಿಯಾಣದಿಂದ ಇನ್ನೂ ಸಾವಿರಾರು ರೈತರು ಈ ಗಡಿಗಳತ್ತ ಬರುತ್ತಿದ್ದಾರೆ. ಇದರ ಮಧ್ಯೆಯೇ ಪ್ರತಿಭಟನೆಯ ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಸಾಮೂಹಿಕ ಭೋಜನ ಮಾಡಿದ್ದಾರೆ. ಗಡಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿರುವುದರಿಂದ ಮತ್ತು ನೂರಾರು ಟ್ರ್ಯಾಕ್ಟರ್‌ಗಳು ನಿಂತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಸಾವಿರಾರು ರೈತರು ಎರಡು ರಾತ್ರಿಗಳನ್ನು ಕಳೆದಿದ್ದಾರೆ. ಭಾನುವಾರ ಈ ಸ್ಥಳಗಳಿಗೆ ಬಂದು ಸೇರಿರುವ ರೈತರ ತಂಡಗಳಲ್ಲಿ ಹಲವು ಮಹಿಳೆಯರೂ ಇದ್ದಾರೆ. ಮಕ್ಕಳೂ ಇದ್ದಾರೆ.ಗಡಿ ಭಾಗದಲ್ಲಿ ಹಾಕಿರುವ ಮುಳ್ಳುತಂತಿ ಬೇಲಿ, ಕಾಂಕ್ರೀಟ್ ಬ್ಲಾಕ್‌ ಮತ್ತು ಬ್ಯಾರಿಕೇಡ್‌ಗಳನ್ನು ರೈತರು ಹಾಗೇ ಇರಿಸಿದ್ದಾರೆ. ಸಂಚಾರವನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ನರ್ಮದಾ ಬಚಾವೋ ಆಂದೋಲನದ ಮುಂದಾಳು ಮೇಧಾ ಪಾಟ್ಕರ್, ಸ್ವರಾಜ್ ಇಂಡಿಯಾ ಅಭಿಯಾನದ ಸಂಸ್ಥಾಪಕ ಯೋಗೇಂದ್ರ ಯಾದವ್ ಅವರು ಸಿಂಘು ಗಡಿಗೆ ಭೇಟಿ ನೀಡಿ, ರೈತರ ಜತೆ ಮಾತುಕತೆ ನಡೆಸಿದ್ದಾರೆ. ರೈತರ ಹೋರಾಟಕ್ಕೆಬೆಂಬಲ ಸೂಚಿಸಿದ್ದಾರೆ.

ಎಎಪಿ ಬೆಂಬಲ: ಕೇಂದ್ರ ಸರ್ಕಾರವು ರೈತರ ಜತೆಗೆ ತಕ್ಷಣವೇ, ಯಾವುದೇ ಷರತ್ತು ಹಾಕದೆ ಮಾತುಕತೆ ನಡೆಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಒತ್ತಾಯಿಸಿದ್ದಾರೆ.

‘ಎಎಪಿ ರೈತರ ಜತೆಗಿದೆ. ನಾವು ಅವರನ್ನು ದೆಹಲಿಗೆ ಸ್ವಾಗತಿಸುತ್ತಿದ್ದೇವೆ. ಅವರ ಹೆಗಲಿಗೆ ಹೆಗಲು ಕೊಟ್ಟು ಹೋರಾಡುತ್ತೇವೆ’ ಎಂದು ಎಎಪಿ ಮುಖಂಡ ಸಂಜಯ್‌ ಸಿಂಗ್‌ ಹೇಳಿದ್ದಾರೆ.

‘ಸಾವಿರಾರು ರೈತರು ಮಾತುಕತೆಗಾಗಿ ದೆಹಲಿಯ ಗಡಿಗೆ ಬಂದಿರುವಾಗ ಗೃಹ ಸಚಿವ ಅಮಿತ್‌ ಶಾ ಅವರು ಚುನಾವಣಾ ಪ್ರಚಾರಕ್ಕಾಗಿ ಹೈದರಾಬಾದ್‌ಗೆ ಹೋಗಿರುವುದು ಅತ್ಯಂತ ಬೇಜವಾಬ್ದಾರಿ ವರ್ತನೆ’ ಎಂದು ವಕ್ತಾರ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT