ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಮಾ.7ರಂದು ಅಂತಿಮ ಹಂತದ ಮತದಾನ

54 ಸ್ಥಾನಗಳಿಗೆ ಚುನಾವಣೆ * 613 ಅಭ್ಯರ್ಥಿಗಳು ಕಣದಲ್ಲಿ
Last Updated 6 ಮಾರ್ಚ್ 2022, 13:19 IST
ಅಕ್ಷರ ಗಾತ್ರ

ಲಖನೌ: ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ 7ನೇ ಹಾಗೂ ಅಂತಿಮ ಹಂತದ ಮತದಾನ ಸೋಮವಾರ (ಮಾರ್ಚ್ 7) ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 54 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮತದಾರರು 613 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಕೋವಿಡ್‌–19 ಪಿಡುಗಿನ ನಿರ್ವಹಣೆ, ರಾಜ್ಯದಲ್ಲಿನ ಕಾನೂನು–ಸುವ್ಯವಸ್ಥೆ ಸ್ಥಿತಿ, ಆರ್ಥಿಕತೆ, ರೈತರ ಸಮಸ್ಯೆಗಳೇ ಪ್ರಚಾರದ ವಿಷಯಗಳಾಗಿದ್ದವು. ಈ ವಿಷಯಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ಹಾಗೂ ವಿರೋಧಿ ಪಾಳೆಯದ ನಾಯಕರು ಆರೋಪ–ಪ್ರತ್ಯಾರೋಪ ನಡೆಸಿದ್ದಕ್ಕೂ ಈ ಹಂತ ಸಾಕ್ಷಿಯಾಯಿತು.

ಅಜಂಗಡ, ಮೌ, ಜಾನ್‌ಪುರ, ಗಾಜಿಪುರ, ಚಂದೌಲಿ ವಾರಾಣಸಿ, ಮಿರ್ಜಾಪುರ, ಭದೋಹಿ ಹಾಗೂ ಸೋನ್‌ಭದ್ರಾ ಜಿಲ್ಲೆಗಳಲ್ಲಿ ಬೆಳಿಗ್ಗೆ 7ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

ಅಪ್ನಾ ದಳ (ಸೋನೆಲಾಲ್), ನಿಶಾದ್‌ ಪಾರ್ಟಿಗಳೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಅಪ್ನಾ ದಳ (ಕೆ), ಓಂ ಪ್ರಕಾಶ್‌ ರಾಜಭರ್ ನೇತೃತ್ವದ ಸುಹೇಲ್‌ದೇವ್ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಅಖಿಲೇಶ್‌ ಯಾದವ್ ಜೊತೆ ಮೈತ್ರಿ ಮಾಡಿಕೊಂಡಿವೆ.

ಅಂತಿಮ ಹಂತ ಬಿಜೆಪಿ ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ನೇತೃತ್ವದ ಮೈತ್ರಿಕೂಟದ ಪಾಲಿಗೆ ಮಹತ್ವದ್ದು. ಹಾಗಾಗಿ, ಮತದಾರರನ್ನು ಓಲೈಸುವ ವಿಷಯದಲ್ಲಿ ಎಲ್ಲ ಪಕ್ಷಗಳಲ್ಲಿ ಪೈಪೋಟಿ ಕಂಡುಬಂದಿತ್ತು.

ಒಂದು ಕಾಲದಲ್ಲಿ ಎಸ್‌ಪಿಯ ಭದ್ರಕೋಟೆಯಾಗಿದ್ದ ಈ ಭಾಗದಲ್ಲಿ 2017ರಲ್ಲಿ 29 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮೈತ್ರಿಕೂಟ ತನ್ನ ಪ್ರಾಬಲ್ಯ ತೋರಿಸಿತು. ಆ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷಗಳಾದ ಅಪ್ನಾ ದಳ 4 ಹಾಗೂ ಎಸ್‌ಬಿಎಸ್‌ಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಬಿಎಸ್‌ಪಿ 6 ಹಾಗೂ ಎಸ್‌ಪಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.

ಅಬ್ಬರದ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಪಕ್ಷಗಳ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ಅಬ್ಬರ ಪ್ರಚಾರ ನಡೆಸಿದರು. ವಾರಾಣಸಿಯಲ್ಲದೇ, ಅಕ್ಕಪಕ್ಕದ ಜಿಲ್ಲೆಗಳ ಕ್ಷೇತ್ರಗಳ ಮತದಾರರನ್ನು ಓಲೈಸುವ ಸಲುವಾಗಿ ಮೋದಿ ಅವರು ಬಹಿರಂಗ ಸಭೆಗಳಲ್ಲದೇ, ವಾರಾಣಸಿ ದಂಡು ಪ್ರದೇಶ, ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ರೋಡ್‌ ಶೋ ನಡೆಸಿದರು.

ಎಸ್‌ಪಿ ಅಭ್ಯರ್ಥಿಗಳ ಪರ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪ್ರಚಾರ ನಡೆಸಿದರು. ಅವರು ವಾರಾಣಸಿಯಲ್ಲಿ ನಡೆದ ಎಸ್‌ಪಿ ರ‍್ಯಾಲಿಯಲ್ಲಿ ಅಖಿಲೇಶ್‌ ಯಾದವ್ ಹಾಗೂ ಆಲ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರೊಂದಿಗೆ ಭಾಗವಹಿಸಿದ್ದರು.

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನಾಲ್ಕು ದಿನಗಳ ಕಾಲ ವಾರಾಣಸಿಯಲ್ಲಿಯೇ ಠಿಕಾಣಿ ಹೂಡಿದ್ದರು. ಅಣ್ಣ ರಾಹುಲ್‌ಗಾಂಧಿ ಜೊತೆ ಪ್ರಚಾರಸಭೆಗಳಲ್ಲಿ ಪಾಲ್ಗೊಂಡರು. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಸಹ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಿದರು.

ಕಣದಲ್ಲಿರುವ ಪ್ರಮುಖರು: ಉತ್ತರಪ್ರದೇಶ ಪ್ರವಾಸೋದ್ಯಮ ಸಚಿವ ನೀಲಕಂಠ ತಿವಾರಿ ವಾರಾಣಸಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಸಚಿವರಾದ ಅನಿಲ್‌ ರಾಜಭರ್ (ಶಿವಪುರ–ವಾರಾಣಸಿ), ರವೀಂದ್ರ ಜೈಸ್ವಾಲ್ (ವಾರಾಣಸಿ ಉತ್ತರ), ಗಿರೀಶ್‌ ಯಾದವ್ (ಜಾನ್‌ಪುರ) ಹಾಗೂ ರಮಾಶಂಕರ್ ಸಿಂಗ್ ಪಟೇಲ್ (ಮಡಿಹಾನ್–ಮಿರ್ಜಾಪುರ) ಕಣದಲ್ಲಿರುವ ಪ್ರಮುಖರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಮಾಜವಾದಿ ಪಕ್ಷ ಸೇರಿದ ದಾರಾಸಿಂಗ್ ಚೌಹಾಣ್‌ ಅವರು ಘೋಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಹಾಗೂ ಮುಲಾಯಂಸಿಂಗ್ ಯಾದವ್ ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ದಿವಂಗತ ಪಾರಸ್‌ನಾಥ್ ಯಾದವ್ ಪುತ್ರ ಲಕಿ ಯಾದವ್ ಜಾನ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕರ್ಹಾಲ್‌ನಿಂದ ಸ್ಪರ್ಧಿಸಿರುವ ಪುತ್ರ ಹಾಗೂ ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್ ಅವರು ಪ್ರಚಾರ ನಡೆಸಿದ್ದಾರೆ. ಆದರೆ, ಮುಲಾಯಂ ಸಿಂಗ್‌ ಅವರು ಲಕಿ ಪರ ಈ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಕಡಿಮೆ ಎನ್ನಲಾಗಿದೆ.

ಇನ್ನು, ಎಸ್‌ಬಿಎಸ್‌ಪಿ ಅಧ್ಯಕ್ಷ ಓಂಪ್ರಕಾಶ್‌ ರಾಜಭರ್ ಝಹೂರಾಬಾದ್‌ನಿಂದ ಕಣಕ್ಕಿಳಿದಿದ್ದರೆ, ಜೆಡಿಯುನ ಧನಂಜಯ್ ಸಿಂಗ್ ಅವರು ಮಲ್ಹಾನಿಯಲ್ಲಿ ಸ್ಪರ್ಧಿಸಿದ್ದಾರೆ.ಗೂಂಡಾ ಮತ್ತು ರಾಜಕಾರಣಿ ಮುಖ್ತಾರ್‌ ಅನ್ಸಾರಿ ಅವರ ಮಗ ಅಬ್ಬಾಸ್‌ ಅನ್ಸಾರಿ ಮೌ ಕ್ಷೇತ್ರದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದಾರೆ.

11

ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಗಳು

2

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರಗಳು

2.06 ಕೋಟಿ

ಮತದಾರರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT