ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆ: ನಿಗಾಕ್ಕೆ ಸೂಚನೆ

Last Updated 15 ಜುಲೈ 2022, 2:16 IST
ಅಕ್ಷರ ಗಾತ್ರ

ನವದೆಹಲಿ: ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುತ್ತಿದ್ದ ಮಂಕಿಪಾಕ್ಸ್‌ ವೈರಸ್‌ನ ಮೊದಲ ಪ್ರಕರಣ ಭಾರತದಲ್ಲಿ ವರದಿಯಾಗಿದೆ. ಕೇರಳದ ಒಬ್ಬ ವ್ಯಕ್ತಿಗೆ ಮಂಕಿಪಾಕ್ಸ್ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೆಲ ದಿನಗಳ ಹಿಂದೆ ಯುಎಇಯಿಂದ ಆಗಮಿಸಿದ್ದ 35 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದೂ ತಿಳಿಸಿದ್ದಾರೆ.

ಅವರ ಪೋಷಕರು, ವಿಮಾನದಲ್ಲಿ ಸಮೀಪ ಕುಳಿತಿದ್ದ 11 ಮಂದಿ ಪ್ರಯಾಣಿಕರು, ಕ್ಯಾಬ್ ಮತ್ತು ಆಟೊ ಡ್ರೈವರ್‌ಗಳು, ಚಿಕಿತ್ಸೆ ನೀಡಿದ್ದ ಕೊಲ್ಲಂನ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಾಥಮಿಕ ಸಂಪರ್ಕಿತರನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಮಂಕಿಪಾಕ್ಸ್ ರೋಗ ಉಲ್ಬಣದ ಅವಧಿ 21 ದಿನಗಳಾಗಿವೆ.

ತಮ್ಮ ಸ್ನೇಹಿತರೊಬ್ಬರಿಗೂ ಸೋಂಕು ಹರಡಿರುವ ಬಗ್ಗೆ ಸೋಂಕಿತ ವ್ಯಕ್ತಿ ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ. ಯುಎಇಯಿಂದ ಬರುವಾರ ದೇಹವನ್ನು ಸಂಪೂರ್ಣ ಕವರ್ ಮಾಡಿಕೊಂಡಿದ್ದ ರೋಗಿಯು ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳು ಕಂಡುಬಂದ ಬಳಿಕ, ಆತನ ಮಾದರಿಯನ್ನು ರಾಷ್ಟ್ರೀಯ ವೈರಾಣು ಸಂಸ್ತೆಗೆ ಕಳುಹಿಸಲಾಗಿತ್ತು. ಗುರುವಾರ ಸಂಜೆ ಅದರ ವರದಿ ಬಂದಿದ್ದು, ವ್ಯಕ್ತಿಗೆ ಮಂಕಿಪಾಕ್ಸ್ ತಗುಲಿರುವುದು ದೃಢಪಟ್ಟಿದೆ.

ಮಂಕಿಪಾಕ್ಸ್‌ ತಡೆಗೆ ಸಜ್ಜಾಗಿ

ಜಗತ್ತಿನಾದ್ಯಂತ ಮಂಕಿಪಾಕ್ಸ್‌ ವೈರಾಣು ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿದ್ದು, ದೇಶದ ಮೊದಲ ಮಂಕಿಪಾಕ್ಸ್‌ ಪ್ರಕರಣ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ಅಗತ್ಯ ಸಿದ್ಧತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರವು ಗುರುವಾರ ಎಲ್ಲ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ.

ಇದರ ಬೆನ್ನಲ್ಲೇ ಕೇರಳದಾದ್ಯಂತ ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಬಹು ಶಿಸ್ತೀಯ ಉನ್ನತಮಟ್ಟದ ತಂಡವನ್ನು ಕೇಂದ್ರ ಸರ್ಕಾರ ಗುರುವಾರ ಆ ರಾಜ್ಯಕ್ಕೆ ಕಳುಹಿಸಿದೆ.

ಸಂಯುಕ್ತ ಅರಬ್‌ ಸಂಸ್ಥಾನದಿಂದ ಕೇರಳಕ್ಕೆ ಮರಳಿರುವ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಾಣು ದೃಢಪಟ್ಟ ದಿನವೇ ಆಸ್ಪತ್ರೆಗಳು, ನುರಿತ ಮಾನವ ಸಂಪನ್ಮೂಲ ಮತ್ತು ಇಂತಹ ಪ್ರಕರಣಗಳ ನಿರ್ವಹಣೆಗೆ ಅಗತ್ಯ ವ್ಯವಸ್ಥೆ ಸಿದ್ಧವಾಗಿಡಲು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ರವಾನಿಸಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ‌ರಾಜೇಶ್‌ ಭೂಷಣ್‌, ರಾಜ್ಯಗಳಿಗೆ ಕಳುಹಿಸಿರುವ ಪತ್ರದಲ್ಲಿ, ‘2022ರ ಜನವರಿಯಿಂದ ಜೂನ್‌ 22ರವರೆಗೆ ಜಗತ್ತಿನ 50 ದೇಶಗಳಲ್ಲಿ ಒಟ್ಟು 3,413 ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಮೃತಪಟ್ಟಿರುವ ಮಾಹಿತಿ ವಿಶ್ವ ಆರೋಗ್ಯ ಸಂಸ್ಥೆಗೆ ಸಿಕ್ಕಿದೆ. ಯುರೋಪ್‌ನಲ್ಲಿ (ಶೇ 86) ಮತ್ತು ಅಮೆರಿಕದಲ್ಲಿ (ಶೇ 11) ಹೆಚ್ಚು ಪ್ರಕರಣ ವರದಿಯಾಗಿವೆ’ ಎಂದು ಉಲ್ಲೇಖಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಈವರೆಗೆ 63 ದೇಶಗಳಲ್ಲಿ ವೈರಾಣು ಕಾಣಿಸಿದ್ದು, ಸುಮಾರು 9,200 ಪ್ರಕರಣಗಳು ಪತ್ತೆಯಾಗಿವೆ.

‘ವಿಶ್ವ ಆರೋಗ್ಯ ಸಂಸ್ಥೆಯ ಐದು ವಲಯಗಳ ಕ್ಲಸ್ಟರ್‌ ಮಟ್ಟದಲ್ಲಿ ಏಕಕಾಲದಲ್ಲಿ ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲು. ಪ್ರಕರಣಗಳ ಪ್ರಸರಣ ಜಾಗತಿ
ಕವಾಗಿ ನಿಧಾನಗತಿಯಲ್ಲಿ ಇದ್ದರೂ ನಿರಂತರ ಏರಿಕೆಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಕರಣಗಳ ಒಟ್ಟಾರೆ ಅಪಾಯವನ್ನೂ ಮೌಲ್ಯಮಾಪನ ಮಾಡಲಾಗಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ವೈರಾಣುವಿನಿಂದ ಮರಣ ತಡೆಗಟ್ಟಲು ರೋಗಿಯನ್ನು ಪ್ರತ್ಯೇಕವಾಗಿರಿಸುವುದು (ಗಾಯ, ಹುಣ್ಣುಗಳು ಗುಣವಾಗುವವರೆಗೆ), ಹುಣ್ಣುಗಳಿಗೆ ಪೂರಕ ಚಿಕಿತ್ಸೆಗಳು, ನಿರಂತರ ಮೇಲ್ವಿಚಾರಣೆ ಮತ್ತು ಸಮಯೋಚಿತ ಚಿಕಿತ್ಸೆ ನೀಡುವುದು ಪ್ರಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT