ಸೋಮವಾರ, ಆಗಸ್ಟ್ 8, 2022
24 °C
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬ್ರಹ್ಮಪುತ್ರ

ಉಲ್ಬಣಿಸಿದ ಅಸ್ಸಾಂ ಪ್ರವಾಹ: ವಿವಿಧ ಪ್ರದೇಶಗಳು ಜಲಾವೃತ, 8 ಜನರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದು, ಶನಿವಾರ ರಾತ್ರಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಗುವಾಹಟಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ವಿವಿಧ ಪ್ರದೇಶಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‌

ಮಳೆಯಿಂದಾಗಿ ಗುವಾಹಟಿಯಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಬ್ರಹ್ಮಪುತ್ರ ನದಿಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದ್ದು, ಗುವಾಹಟಿಯಲ್ಲಿ ನದಿಯ ನೀರಿನ ಮಟ್ಟವು ಅದರ ಉಪನದಿ ಭಾರಲುಗಿಂತ ಗಣನೀಯವಾಗಿ ಏರಿದೆ. ಹಾಗಾಗಿ, ಭಾರಲು ನದಿಯ ಸ್ಲೂಸ್ ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಗುವಾಹಟಿ ಮಹಾನಗರ ಪಾಲಿಕೆ ಆಯುಕ್ತ ದೇವಶಿಶ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಇತ್ತೀಚಿನ ವರದಿಗಳ ಪ್ರಕಾರ, ಕಳೆದ ಆರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ಪ್ರವಾಹ ಮತ್ತು ಭೂಕುಸಿತವುಂಟಾಗಿದೆ. ಕಳೆದ 24 ಗಂಟೆಗಳಲ್ಲಿ 118 ಕಂದಾಯ ವಲಯಗಳು ಮತ್ತು 4,291 ಗ್ರಾಮಗಳನ್ನು ಒಳಗೊಂಡ 32 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ.

ಪ್ರವಾಹದಿಂದಾಗಿ ಸುಮಾರು 31 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇವರಲ್ಲಿ 1. 56 ಲಕ್ಷ ಮಂದಿ ರಾಜ್ಯದ 514 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಪೊಲೀಸರು ಮತ್ತು ಎಎಸ್‌ಡಿಎಂಎ ಸ್ವಯಂಸೇವಕರನ್ನು  ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಇದುವರೆಗೆ 20,983 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿ ಹೇಳಿದೆ. 

ಬ್ರಹ್ಮಪುತ್ರ ಸೇರಿದಂತೆ ಅದರ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹದಿಂದಾಗಿ ಇದುವರೆಗೆ 8 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಈ ವರ್ಷದ ಪ್ರವಾಹ ಮತ್ತು ಭೂಕುಸಿತದಲ್ಲಿ ಸತ್ತವರ ಸಂಖ್ಯೆ 62ಕ್ಕೆ ಏರಿದೆ ಎಂದೂ ವರದಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು