ವೆಲ್ಲೂರು: ಐತಿಹಾಸಿಕ ವೆಲ್ಲೂರು ಕೋಟೆಗೆ ಭೇಟಿ ನೀಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಒತ್ತಾಯಪೂರ್ವಕವಾಗಿ ಹಿಜಾಬ್ ತೆಗೆಯುವಂತೆ ಹೇಳಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 27ರಂದು ನಡೆದಿದ್ದ ಈ ಘಟನೆಯನ್ನು ಬಂಧಿತರು ವಿಡಿಯೊ ಮಾಡಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಮಹಿಳೆಗೆ ತೊಂದರೆ ನೀಡಿದ ಗುಂಪಿನಲ್ಲಿ ಒಟ್ಟು ಏಳು ಮಂದಿ ಇದ್ದರು. ಇದರಲ್ಲಿ 17 ವರ್ಷದ ಬಾಲಕನನ್ನು ಸರ್ಕಾರಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಉಳಿದ ಆರು ಮಂದಿಯನ್ನು ಬಂಧಿಸಲಾಗಿದೆ. ಇಮ್ರಾನ್ ಬಾಷಾ (22), ಅಶ್ರಫ್ ಬಾಷಾ (20), ಮೊಹಮ್ಮದ್ ಫೈಜಲ್ (23), ಸಂತೋಷ್ (23), ಇಬ್ರಾಹಿಂ ಬಾಷಾ (24) ಹಾಗೂ ಪ್ರಶಾಂತ್ (20) ಬಂಧಿತರು’ ಎಂದು ಪೊಲೀಸರು ಗುರುವಾರ ಹೇಳಿದರು.
‘ಈ ಯುವಕರು ಆಟೊರಿಕ್ಷಾ ಚಾಲಕರು ಎಂದು ಶಂಕಿಸಲಾಗಿದೆ. ಕೋಟೆಗೆ ಭೇಟಿ ನೀಡಿದ್ದ ಇನ್ನೂ ಮೂವರು ಮಹಿಳೆಯರಿಗೆ ಹಿಜಾಬ್ ತೆಗೆಯುವಂತೆ ಒತ್ತಾಯಪಡಿಸಿದ್ದರು. ಈ ಯುವಕರು ಯಾಕಾಗಿ ಈ ರೀತಿ ವರ್ತನೆ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ದೊರೆತಿಲ್ಲ. ತನಿಖೆ ಬಳಿಕಷ್ಟೇ ಕಾರಣ ತಿಳಿದುಬರಬೇಕಿದೆ. ಸಾರ್ವಜನಿಕರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ವಿನಂತಿಸಿಕೊಳ್ಳುತ್ತೇನೆ’ ಎಂದು ವೆಲ್ಲೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ರಾಜೇಶ್ ಖನ್ನಾ ಹೇಳಿದರು.
‘ಮಹಿಳೆಯ ಜೊತೆಗಿದ್ದ ಆಕೆಯ ಸ್ನೇಹಿತನನ್ನು ಪ್ರಶ್ನಿಸಿದ್ದ ಈ ಯುವಕರು, ಹಿಜಾಬ್ ಧರಿಸಿದ ಮಹಿಳೆಯೊಂದಿಗೆ ಹೊರಗಡೆ ತಿರುಗಾಡಲು ಬರುವುದು ಸರಿಯೇ?’ ಎಂದು ಕೇಳಿದ್ದಾರೆ.
ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ: ಈ ಘಟನೆಯ ಬಳಿಕ ವೆಲ್ಲೂರು ಕೋಟಿಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಕೋಟಿಯಲ್ಲಿ ಪೊಲೀಸ್ ಬೂತ್‌ವೊಂದನ್ನೂ ತೆರೆಯಲಾಗಿದೆ.
‘ಈ ಪೊಲೀಸ್ ಬೂತ್‌ಅನ್ನು ಶಾಶ್ವತವಾಗಿ ತೆರೆಯುವ ಉದ್ದೇಶವಿದೆ. ಪೊಲೀಸ್ ಅಧಿಕಾರಿಗಳ ನಂಬರ್‌ಗಳನ್ನು ಈ ಬೂತ್‌ಗಳಲ್ಲಿ ದೊಡ್ಡದಾಗಿ ಹಾಕಿಸಲಾಗಿವುದು’ ಎಂದು ರಾಜೇಶ್ ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.