ಜೆಇಎಂ ಉಗ್ರರ ಹತ್ಯೆ: ವಿದೇಶದ ಪ್ರತಿನಿಧಿಗಳಿಗೆ ಮಾಹಿತಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ (ಜೆಇಎಂ) ಉಗ್ರರ ದಾಳಿಯ ಸಂಚಿನ ಕುರಿತು ಅಮೆರಿಕ, ರಷ್ಯಾ, ಫ್ರಾನ್ಸ್, ಜಪಾನ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಪ್ರತಿನಿಧಿಗಳಿಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಸೋಮವಾರ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಗ್ರರ ದಾಳಿಯ ಯೋಜನೆಯನ್ನು ಭದ್ರತಾ ಪಡೆ ಸಿಬ್ಬಂದಿ ನ.19ರಂದು ವಿಫಲಗೊಳಿಸಿದ್ದರು. ‘ಘಟನೆಯ ವಿಸ್ತೃತ ವಿವರದ ಜೊತೆ, ಹತ್ಯೆಯಾದ ಉಗ್ರರ ಬಳಿ ಇದ್ದ ಶಸ್ತ್ರಾಸ್ತ್ರಗಳು ಹಾಗೂ ವಶಪಡಿಸಿಕೊಂಡ ಇತರೆ ವಸ್ತುಗಳ ವಿವರವನ್ನು ಪ್ರತಿನಿಧಿಗಳಿಗೆ ನೀಡಲಾಗಿದ್ದು, ಇವೆಲ್ಲವೂ ಅವರು ಪಾಕಿಸ್ತಾನ ಮೂಲದವರು ಎನ್ನುವುದಕ್ಕೆ ಆಧಾರ’ ಎಂದು ಅವರ ಗಮನಕ್ಕೆ ತರಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಇರುವ ಶಾಂತಿಯ ವಾತಾವರಣವನ್ನು ಹದಗೆಡಿಸಲು ಯತ್ನಿಸುತ್ತಿರುವ ಪಾಕಿಸ್ತಾನದ ನಡೆಯ ಬಗ್ಗೆ ಕಳವಳವನ್ನು ಪ್ರತಿನಿಧಿಗಳ ಮುಂದೆ ಭಾರತವು ಇರಿಸಿದೆ. ಜೊತೆಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕೇಂದ್ರಾಡಳಿತ ಪ್ರದೇಶದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಪಾಕಿಸ್ತಾನದ ಹುನ್ನಾರದ ಸೂಕ್ಷ್ಮತೆಯನ್ನು ಅವರ ಗಮನಕ್ಕೆ ತರಲಾಗಿದೆ. 2019 ಫೆಬ್ರುವರಿಯಲ್ಲಿ ನಡೆದ ಪುಲ್ವಾಮಾ ದಾಳಿಗಿಂತ ದೊಡ್ಡ ದಾಳಿಯನ್ನು ನಡೆಸಲು ಉಗ್ರರು ಸಜ್ಜಾಗಿ ಬಂದಿದ್ದರು ಎನ್ನುವ ಸ್ಪಷ್ಟ ಚಿತ್ರಣವನ್ನು ಅವರ ಮುಂದಿಡಲಾಗಿದೆ. ಈ ಹಿಂದೆ ನಡೆದಂಥ ದಾಳಿಯಲ್ಲೂ ಜೆಇಎಂ ಉಗ್ರರ ಕೈವಾಡದ ಕುರಿತೂ ಮಾಹಿತಿ ಹಂಚಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.
ಮೂಲಗಳ ಪ್ರಕಾರ ಸಾಂಬಾ ವಲಯದಲ್ಲಿ ಪತ್ತೆಯಾಗಿರುವ ಸುರಂಗದ ಮುಖಾಂತರ ಉಗ್ರರು ಭಾರತದೊಳಗೆ ಪ್ರವೇಶಿಸಿರುವುದರ ಮಾಹಿತಿ, ಎಕೆ 47 ರೈಫಲ್ ಹಾಗೂ ಇತರೆ ವಸ್ತುಗಳ ಮೇಲಿದ್ದ ಗುರುತುಗಳ ವಿವರವನ್ನೂ ಪ್ರತಿನಿಧಿಗಳಿಗೆ ನೀಡಲಾಗಿದೆ.
ಟ್ರಕ್‌ನಲ್ಲಿ ಅಡಗಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದೊಳಗೆ ಪ್ರವೇಶಿಸಲು ಯತ್ನಿಸಿದ್ದ ನಾಲ್ವರು ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿಯು ನಗ್ರೋಟಾದಲ್ಲಿ ಕಳೆದ ಗುರುವಾರ ಮುಂಜಾನೆ ಹೊಡೆದುರುಳಿಸಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.