ಗುರುವಾರ , ಅಕ್ಟೋಬರ್ 22, 2020
21 °C
ಮುಂಬೈನಲ್ಲಿ ಸೆ. 12ರಂದು ವಿದ್ಯುತ್‌ ಪೂರೈಕೆ ಸ್ಥಗಿತ ಘಟನೆ

ಮುಂಬೈ| ವಿದ್ಯುತ್‌ ಸ್ಥಗಿತ: ವಿಧ್ವಂಸಕ ಕೃತ್ಯದ ಆಯಾಮದಲ್ಲಿಯೂ ತನಿಖೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಸೋಮವಾರ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡ ಘಟನೆ ಕುರಿತಂತೆ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಮುಂದಾಗಿದೆ.

ಅದರಲ್ಲೂ, ವಿಧ್ವಂಸಕ ಕೃತ್ಯ ನಡೆಸುವ ಯತ್ನದ ಭಾಗವಾಗಿ ಈ ರೀತಿ ಮಾಡಲಾಗಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

‘ವಿದ್ಯುತ್‌ ಪೂರೈಕೆ ವ್ಯವಸ್ಥೆಯ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮುನ್ನ ಕೆಲವು ಶಿಷ್ಟಾಚಾರ ಪಾಲಿಸಬೇಕಾಗುತ್ತದೆ. ಅವುಗಳ ಪಾಲನೆ ಆಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಅಲ್ಲದೇ, ಈ ಘಟನೆ ಹಿಂದೆ ವಿಧ್ವಂಸಕ ಕೃತ್ಯ ನಡೆಸುವ ಯತ್ನ ಇತ್ತು ಎಂಬ ವಾದವನ್ನು ಸಹ ತಳ್ಳಿ ಹಾಕಲಾಗದು’ ಎಂದು ಇಂಧನ ಸಚಿವ ಡಾ.ನಿತಿನ್‌ ರಾವುತ್‌ ಹೇಳಿದರು.

‘ಘಟನೆ ಕುರಿತಂತೆ ತನಿಖೆ ಆರಂಭಿಸಿರುವ ಸಮಿತಿ ವಾರದೊಳಗೆ ತನ್ನ ಮಧ್ಯಂತರ ವರದಿ ಸಲ್ಲಿಸಲಿದೆ. ಸಮಿತಿ ಮಾಡುವ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ತನಿಖೆಗಾಗಿ ಸಮಿತಿಯೊಂದನ್ನು ರಚಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಲಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದೂ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ ಮೂಲದ ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರವೂ ತನಿಖೆ ಆರಂಭಿಸಿದೆ.

ಮುಂಬೈನ ಕಳವಾದಲ್ಲಿರುವ 400 ಕೆ.ವಿ ಮಾರ್ಗ–1ರಲ್ಲಿ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಹೀಗಾಗಿ ವಿದ್ಯುತ್‌ ಪೂರೈಕೆಯ ಸಂಪೂರ್ಣ ಭಾರವನ್ನು ಮಾರ್ಗ–2ಕ್ಕೆ ವರ್ಗಾಯಿಸಲಾಯಿತು. ಈ ಕಾರಣದಿಂದ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡು, ಪೂರೈಕೆ ಸ್ಥಗಿತಗೊಂಡಿತು ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ವಿದ್ಯುತ್‌ ಪೂರೈಕೆಯಲ್ಲಾದ ವ್ಯತ್ಯಯದಿಂದಾಗಿ ಮುಂಬೈ ನಗರ, ಉಪನಗರ, ಠಾಣೆ,  ಪಾಲ್ಘರ್‌ ಹಾಗೂ ರಾಯಗಡದಲ್ಲಿ ಸಾಕಷ್ಟು ತೊಂದರೆಯಾಯಿತು.

ಅದಾನಿ, ಟಾಟಾ ಹಾಗೂ ಬೆಸ್ಟ್‌ ಮಾಲೀಕತ್ವದ ಕಂಪನಿಗಳು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಸೋಮವಾರವೇ ವಿದ್ಯುತ್‌ ಪೂರೈಕೆ ಮರುಸ್ಥಾಪನೆಯಾಗುವಂತೆ ಕ್ರಮ ಕೈಗೊಂಡವು. ಆದರೆ, ಹಲವು ಪ್ರದೇಶಗಳಿಗೆ ವಿದ್ಯುತ್‌ ಪೂರೈಸುವ ಜವಾಬ್ದಾರಿ ಹೊತ್ತಿರುವ, ರಾಜ್ಯ ಸರ್ಕಾರ ಒಡೆತನದ ಮಹಾವಿತರನ್‌ (ಎಂಎಸ್‌ಇಡಿಸಿಎಲ್‌) ಪೂರೈಕೆಯನ್ನು ಮಂಗಳವಾರ ಪುನರ್‌ಸ್ಥಾಪಿಸಿತು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು