ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ವಾಯುನೆಲೆ ಮೇಲೆ ಡ್ರೋನ್‌ ದಾಳಿ ‍ಪ್ರಕರಣ ಎನ್‌ಐಎಗೆ ಹಸ್ತಾಂತರ

Last Updated 29 ಜೂನ್ 2021, 21:13 IST
ಅಕ್ಷರ ಗಾತ್ರ

ಜಮ್ಮು/ನವದೆಹಲಿ:ಜಮ್ಮು ವಿಮಾನ ನಿಲ್ದಾಣದಲ್ಲಿನ ವಾಯುಪಡೆ ನೆಲೆಯ ಮೇಲೆ ಬಾಂಬ್ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿ ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ಆದೇಶಿಸಿದೆ.

ಪಾಕಿಸ್ತಾನದ ಉಗ್ರ ಸಂಘಟನೆಗಳು ಭಯೋತ್ಪಾದನಾ ದಾಳಿ ನಡೆಸಲು ಇದೇ ಮೊದಲ ಬಾರಿ ಡ್ರೋನ್‌ ಬಳಸಿವೆ. ಹೀಗಾಗಿ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯವು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಈ ದಾಳಿ ನಡೆಸಿದ ಡ್ರೋನ್‌ಗಳು ಪಾಕಿಸ್ತಾನದಿಂದ ಬಂದಿರಬಹುದು. ಈ ದಾಳಿಯ ಹಿಂದೆ ಲಷ್ಕರ್ ಎ ತಯಬಾ (ಎಲ್‌ಇಟಿ) ಉಗ್ರ ಸಂಘಟನೆ ಇರುವ ಸಾಧ್ಯತೆ ಇದೆ’ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ.

ಜಮ್ಮುವಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ‘ಡ್ರೋನ್‌ಗಳು ಗಡಿಯಾಚೆಯಿಂದ ಬಂದು ಈ ದಾಳಿ ನಡೆಸಿ, ವಾಪಸ್ ಆಗಿರುವ ಸಾಧ್ಯತೆ ಅಧಿಕವಾಗಿದೆ. ಡ್ರೋನ್‌ಗಳು ಬಂದುಹೋದ ಪಥವನ್ನು ಪತ್ತೆ ಮಾಡಲು ಯತ್ನಿಸಲಾಗುತ್ತಿದೆ. ದಾಳಿ ನಡೆದ ಸ್ಥಳದ ಸಮೀಪದಲ್ಲಿ ಇರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಸೇನಾಠಾಣೆಯ ಆವರಣದ ಮೇಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಆದರೆ ಎಲ್ಲಾ ಕ್ಯಾಮೆರಾಗಳು ರಸ್ತೆಯ ಕಡೆ ಮುಖ ಮಾಡಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಆರ್‌ಡಿಎಕ್ಸ್‌ ಮತ್ತಿತರ ಹಲವು ಕಚ್ಚಾವಸ್ತುಗಳನ್ನು ಮಿಶ್ರಮಾಡಿ ಈ ಬಾಂಬ್‌ಗಳನ್ನು ತಯಾರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಬಾಂಬ್‌ನ ವಿವರ ಪೂರ್ಣವಾಗಿ ದೊರೆತಿಲ್ಲ. ವಿಧಿವಿಜ್ಞಾನ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ತನಿಖೆಯಲ್ಲಿ ಎನ್‌ಐಎಗೆ ಪೂರ್ಣ ಸಹಕಾರ ನೀಡುತ್ತೇವೆ’ ಎಂದು ದಿಲ್‌ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರು ಡ್ರೋನ್‌ ಹಾರಿಸದಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಸಭೆ
ಡ್ರೋನ್‌ ದಾಳಿಯಂತಹ ಸವಾಲುಗಳನ್ನು ಎದುರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್ ಅವರ ಜತೆ ಮಂಗಳವಾರ ಸಭೆ ನಡೆಸಿದ್ದಾರೆ.

‘ಇಂತಹ ದಾಳಿಯನ್ನು ತಡೆಗಟ್ಟಲು ಅಗತ್ಯವಿರುವ ಸಲಕರಣೆಗಳನ್ನು ಭದ್ರತಾ ಪಡೆಗಳಿಗೆ ಒದಗಿಸುವ, ದೇಶದ ಯುವಜನರು ಮತ್ತು ನವೋದ್ಯಮಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಚರ್ಚೆ ನಡೆದಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT