ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಕೋವಿಡ್‌ ಆತಂಕ: ಎಚ್ಚರಿಕೆ ವಹಿಸಲು ರಾಜ್ಯಗಳಿಗೆ ಸೂಚನೆ

ಕೇಂದ್ರ ಆರೋಗ್ಯ ಸಚಿವರ ಸಭೆ: ಮಾಸ್ಕ್‌ ಧರಿಸಲು, ಲಸಿಕೆ ಪಡೆಯಲು ಸಲಹೆ
Last Updated 21 ಡಿಸೆಂಬರ್ 2022, 15:33 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ದಿಢೀರ್‌ ಏರಿಕೆಯಾಗಿರುವ ಹಿನ್ನೆಲೆಯಲ್ಲಿಕಣ್ಗಾವಲು ಹೆಚ್ಚಿಸಲು ಹಾಗೂ ಲಸಿಕೀಕರಣಕ್ಕೆ ಒತ್ತು ನೀಡಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಸೂಚಿಸಿದೆ.

ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುವುದು ಸೇರಿ ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಜ್ಞರು ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಚೀನಾ ಸೇರಿದಂತೆ ಇತರೆ ದೇಶಗಳಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಸಾಮೂಹಿಕವಾಗಿ ಪರೀಕ್ಷೆಗೆ (ರ‍್ಯಾಂಡಮ್‌) ಒಳಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅಧ್ಯಕ್ಷತೆಯಲ್ಲಿ ನಡೆದ ತಜ್ಞರು ಹಾಗೂ ಅಧಿಕಾರಿಗಳ ಸಭೆಯಲ್ಲಿ ದೇಶದಲ್ಲಿನ ಪರಿಸ್ಥಿತಿ ಅವಲೋಕಿಸಲಾಗಿದ್ದು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತೂ ಚರ್ಚಿಸಲಾಗಿದೆ.

ಮುಂದೆ ಹಬ್ಬಗಳ ಋತು ಶುರುವಾಗಲಿದೆ. ಹೀಗಾಗಿ ಎಂತಹುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸಜ್ಜಾಗಬೇಕು. ಕೋವಿಡ್‌ನ ಹೊಸ ತಳಿಯ ಬಗ್ಗೆ ಜಾಗೃತರಾಗಿರಬೇಕು.ಕೋವಿಡ್‌ ಸೋಂಕಿತರಿಂದ ಸಂಗ್ರಹಿಸಲಾಗುವ ಮಾದರಿಗಳನ್ನು ಪ್ರತಿದಿನವೂ ಕೇಂದ್ರ ಸರ್ಕಾರದ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆ ಐಎನ್‌ಎಸ್‌ಎಸಿಒಜಿಯ ಪ್ರಯೋಗಾಲಯಗಳಿಗೆ ಕಳುಹಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ.

ಕೋವಿಡ್‌ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ವಾರಕ್ಕೊಮ್ಮೆ ಸಭೆ ನಡೆಸಲೂ ತೀರ್ಮಾನಿಸಲಾಗಿದೆ.

ಭಾರತದಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಆದರೆ ಜಾಗತಿಕ ಮಟ್ಟದಲ್ಲಿ ಪ್ರಕರಣಗಳು ಹೆಚ್ಚಳವಾಗಿವೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಹೊಸ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿವೆ. ಇದೇ 20ರಂದು ದೇಶದಲ್ಲಿ ವರದಿಯಾಗಿರುವ ಹೊಸ ಪ್ರಕರಣಗಳಲ್ಲಿ ಈ ಐದು ರಾಜ್ಯಗಳ ಪಾಲು ಶೇ 84ರಷ್ಟಿದೆ ಎಂದು ಮಾಂಡವೀಯ ಹೇಳಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಳಸಲಾಗುತ್ತಿದ್ದ ಔಷಧಗಳನ್ನು ದಾಸ್ತಾನು ಇಡುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಔಷಧ ಹಾಗೂ ಆಯುಷ್‌ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.

‘ಮಧುಮೇಹ ಇರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ’

‘ಕೋವಿಡ್‌–19 ಕುರಿತು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ ಇರುವವರು (ಕೋಮಾರ್ಬಿಡಿಟಿ), ವಯಸ್ಸಾದವರು ಜನಜಂಗುಳಿ ಇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು’ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್‌ ಸಲಹೆ ನೀಡಿದ್ದಾರೆ.

‘ಅರ್ಹರ ಪೈಕಿ ಶೇ 27 ರಿಂದ 28 ರಷ್ಟು ಮಂದಿ ಮಾತ್ರ ಕೋವಿಡ್‌ ಲಸಿಕೆ ಪಡೆದಿದ್ದಾರೆ. ವಿಮಾನ ಪ್ರಯಾಣಿಕರಿಗೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಿಲ್ಲ’ ಎಂದಿದ್ದಾರೆ.

ಆರೋಗ್ಯ, ಫಾರ್ಮಾಸ್ಯೂಟಿಕಲ್, ಬಯೋಟೆಕ್ನಾಲಜಿ, ಆಯುಷ್‌ ಇಲಾಖೆಗಳ ಕಾರ್ಯದರ್ಶಿಗಳು, ಐಸಿಎಂಆರ್‌ ನಿರ್ದೇಶಕ ಜನರಲ್‌ ರಾಜೀವ್‌ ಬಹಲ್, ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಮುಖ್ಯಸ್ಥ ಡಾ.ಎನ್‌.ಕೆ.ಅರೋರಾ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

**

ಕೋವಿಡ್‌ ಇನ್ನೂ ಮುಗಿದಿಲ್ಲ. ಜಾಗೃತರಾಗಿರುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದ್ದೇನೆ. ಯಾವುದೇ ಪರಿಸ್ಥಿತಿ ನಿಭಾಯಿಸಲು ನಾವು ಸನ್ನದ್ಧರಾಗಿದ್ದೇವೆ–ಮನ್ಸುಖ್‌ ಮಾಂಡವೀಯ, ಕೇಂದ್ರ ಆರೋಗ್ಯ ಸಚಿವ

**

ಮುಖ್ಯಾಂಶಗಳು

*ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ‌ ಹೊಸ ಪ್ರಕರಣಗಳು ಹೆಚ್ಚು ಪತ್ತೆ

*ವಿದೇಶಿ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇರ‍್ಯಾಂಡಮ್‌ ಪರೀಕ್ಷೆಗೆ ಒಳಪಡಿಸಲು ನಿರ್ಧಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT