ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್‌ ವಿಸ್ಟಾ ಯೋಜನೆಯ ಹಣವನ್ನು ಜನರ ಜೀವ ಉಳಿಸಲು ಬಳಸಿ -ಪ್ರಿಯಾಂಕಾ ಗಾಂಧಿ

ಕೇಂದ್ರ ಸರ್ಕಾರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ‍ಪ್ರಿಯಾಂಕಾ ಗಾಂಧಿ ಒತ್ತಾಯ
Last Updated 4 ಮೇ 2021, 9:21 IST
ಅಕ್ಷರ ಗಾತ್ರ

ನವದೆಹಲಿ: ‘ಸೆಂಟ್ರಲ್‌ ವಿಸ್ಟಾ ಯೋಜನೆಯಡಿ ಪ್ರಧಾನಿಯವರ ನೂತನ ಗೃಹ ನಿರ್ಮಾಣ ಸೇರಿದಂತೆ ದೇಶದ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟಿರುವ ಎಲ್ಲ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರ ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಜನರ ಜೀವ ಉಳಿಸಲು ವಿನಿಯೋಗಿಸಬೇಕು‘ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಡಿಸೆಂಬರ್ 2022ರೊಳಗೆ ಸೆಂಟ್ರಲ್ ವಿಸ್ಟಾ ಯೋಜನೆಯಡಿ ಪ್ರಧಾನಿಯವರ ನೂತನ ಗೃಹ ನಿರ್ಮಾಣ ಕೆಲಸ ಪೂರ್ಣಗೊಳಿಸುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಸೂಚಿಸಿರುವುದರ ಕುರಿತು ಪ್ರಿಯಾಂಕಾ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ‘ಕೋವಿಡ್‌ ಲಸಿಕೆ ಮತ್ತು ಆಮ್ಲಜನಕದ ಕೊರತೆಯಿಂದ ಜನರು ಸಂಕಷ್ಟ ಎದುರಿಸುತ್ತಿರುವ ವೇಳೆಯಲ್ಲಿ ಇಂಥ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿರುವ ಹಣವನ್ನು ಜನರ ಜೀವ ಉಳಿಸಲು ಬಳಸಬೇಕು‘ ಎಂದು ಒತ್ತಾಯಿಸಿದ್ದಾರೆ.

ಕೋವಿಡ್‌ನಿಂದಾಗಿ ದೇಶದಾದ್ಯಂತ ಏಕಕಾಲಕ್ಕೆ ಆಮ್ಲಜನಕ, ಹಾಸಿಗೆ, ಲಸಿಕೆ, ಔಷಧಗಳ ಕೊರತೆಯಿಂದ ಜನರು ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ನೂತನ ನಿವಾಸಕ್ಕಾಗಿ ವ್ಯಯಿಸುವ ₹13ಸಾವಿರ ಕೋಟಿ ಹಣವನ್ನು ಜನರ ಜೀವ ಉಳಿಸುವ ಕಾರ್ಯಗಳಿಗೆ ಬಳಸುವಂತೆ ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿಯವರ ನೂತನ ನಿವಾಸ ಡಿಸೆಂಬರ್ 2022ರೊಳಗೆ ಪೂರ್ಣಗೊಳ್ಳುವ ಸುದ್ದಿ ಹಾಗೂ ದೇಶದಲ್ಲಿ ಲಸಿಕೆ, ಆಮ್ಲಜನಕ ಕೊರತೆ ಇರುವ ಸುದ್ದಿಗಳ ತುಣುಕುಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಇಂಥ ವೆಚ್ಚಗಳು ಸರ್ಕಾರದ ಆದ್ಯತೆ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸುತ್ತದೆ‘ ಎಂದು ಪ್ರಿಯಾಂಕಾ ಎಚ್ಚರಿಸಿದ್ದಾರೆ.

https://twitter.com/priyankagandhi/status/1389458016450220040

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT