ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ವಿಧಾನಸಭೆ ಚುನಾವಣೆ: ಮೋದಿ, ರಾಹುಲ್‌ ಪ್ರಚಾರ: ರಂಗೇರಿದ ಕಣ

Last Updated 21 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಗುಜರಾತ್‌ ವಿಧಾನಸಭೆ ಚುನಾವಣಾ ಪ್ರಚಾರ ಕಣ ರಂಗೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಗುಜರಾತ್‌ನಲ್ಲಿ ಇದ್ದು ವಿವಿಧೆಡೆ ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತು ಇತರ ಮುಖಂಡರು ಕೂಡ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ‘ಭಾರತ್‌ ಜೋಡೊ’ ಯಾತ್ರೆಯಿಂದ ಬಿಡುವು ಪಡೆದುಕೊಂಡು ಗುಜರಾತ್‌ನಲ್ಲಿ ಸೋಮವಾರ ಪ್ರಚಾರ ನಡೆಸಿದ್ದಾರೆ. ಬಿಜೆಪಿ–ಕಾಂಗ್ರೆಸ್ ಮುಖಂಡರ ನಡುವೆ ವಾಕ್ಸಮರವೂ ನಡೆಯುತ್ತಿದೆ

‘ಕಾಂಗ್ರೆಸ್‌ಗೆ ಬುಡಕಟ್ಟು ಜನರ ಅಸ್ತಿತ್ವವೇ ತಿಳಿದಿರಲಿಲ್ಲ’

ಜಂಬುಸರ್‌, ನವಸಾರಿ (ಗುಜರಾತ್‌) (ಪಿಟಿಐ): ರಾಮ ಮತ್ತು ಕೃಷ್ಣನ ಕಾಲದಿಂದಲೇ ಬುಡಕಟ್ಟು ಜನರು ಇಲ್ಲಿ ಇದ್ದರೂ ಬಹಳ ಕಾಲದವರೆಗೆ ಈ ಜನರ ಅಸ್ತಿತ್ವವನ್ನೇ ಕಾಂಗ್ರೆಸ್‌ ಪಕ್ಷವು ಮರೆತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದ್ದಾರೆ.

ಬುಡಕಟ್ಟು ಜನರೇ ಅಧಿಕವಾಗಿರುವ ಭರೂಚ್‌ ಜಿಲ್ಲೆಯ ಜಂಬುಸರ್‌ನಲ್ಲಿ ಬಿಜೆಪಿ ಪರವಾಗಿ ಅವರು ಚುನಾವಣಾ ಪ್ರಚಾರ ನಡೆಸಿದರು.

‘ಬುಡಕಟ್ಟು ಜನರು 1857ರ ಸಿಪಾಯಿ ದಂಗೆಯಲ್ಲಿ ಭಾಗಿಯಾಗಿಲ್ಲವೇ? ಈ ದೇಶಕ್ಕಾಗಿ ಅವರು ಏನೆಲ್ಲ ಮಾಡಿಲ್ಲ... ಆದರೆ, ಅವರಿಗೆ ಅಸ್ತಿತ್ವವೇ ಇಲ್ಲ ಎಂಬಂತೆ ಕಾಂಗ್ರೆಸ್ ಪಕ್ಷವು ಇತ್ತು. ಇಲ್ಲದಿದ್ದರೆ, ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗುವವರೆಗೆ ಬುಡಕಟ್ಟು ಜನರಿಗಾಗಿ ಪ್ರತ್ಯೇಕ ಸಚಿವಾಲಯ ಏಕೆ ಇರಲಿಲ್ಲ? ವಾಜಪೇಯಿ ಸರ್ಕಾರವು ಬುಡಕಟ್ಟು ಜನರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿತು. ಅದಕ್ಕಾಗಿ ಪ್ರತ್ಯೇಕ ಅನುದಾನವನ್ನೂ ಒದಗಿಸಿತು. ನಾನು ಬುಡಕಟ್ಟು ದಿರಿಸು ತೊಡುವುದನ್ನು ಕಾಂಗ್ರೆಸ್ ಪಕ್ಷವು ಇಂದಿಗೂ ಗೇಲಿ ಮಾಡುತ್ತಿದೆ’ ಎಂದು ಮೋದಿ ಹೇಳಿದರು.

ಬುಡಕಟ್ಟು ದಿರಿಸನ್ನು ಗೇಲಿ ಮಾಡುವ ಮತ್ತು ಬುಡಕಟ್ಟು ಜನರಿಗೆ ಆಗಾಗ ಅವಮಾನ ಮಾಡುವ ಕಾಂಗ್ರೆಸ್‌ ಪಕ್ಷದಿಂದ ಬುಡಕಟ್ಟು ಜನರ ಪರಿಸ್ಥಿತಿ ಸುಧಾರಣೆ ಆಗುವುದನ್ನು ನಿರೀಕ್ಷಿಸಲಾಗದು ಎಂದು
ಮೋದಿ ಅಭಿಪ್ರಾಯಪಟ್ಟರು.

ಬಿಜೆಪಿಯನ್ನು ಆಯ್ಕೆ ಮಾಡುವ ಮೂಲಕ ಜನರು ಗುಜರಾತ್‌ ರಾಜ್ಯವು ಮೊದಲ ಸ್ಥಾನದಲ್ಲಿ ಇರುವಂತೆ ನೋಡಿಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಬರಗಾಲ ಮತ್ತು ಸಮಸ್ಯೆ ಇದ್ದರೂ ಇದು ಸಾಧ್ಯವಾಗಿದೆ ಎಂದರು. ಅವರು ದಕ್ಷಿಣ ಗುಜರಾತ್‌ನ ನವಸಾರಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಸತತ ಮೂರನೇ ದಿನವಾದ ಸೋಮವಾರವೂ ಮೋದಿ ಮೂರು ರ‍್ಯಾಲಿಗಳನ್ನು ನಡೆಸಿದ್ದಾರೆ.

‘ಈ ಹಿಂದೆ ಗುಜರಾತ್‌ನಲ್ಲಿ ಇದ್ದ ಕಾಂಗ್ರೆಸ್ ಸರ್ಕಾರವು ಮೀನುಗಾರರಿಗಾಗಿ ಏನನ್ನೂ ಮಾಡಿಲ್ಲ. ಆದರೆ, ಬಿಜೆಪಿ ಸರ್ಕಾರವು ಹಲವು ಕೆಲಸಗಳನ್ನು ಮಾಡಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಅನ್ನು ಮೀನುಗಾರರಿಗೂ ವಿಸ್ತರಿಸಿದೆ. ನಾವು ಇತ್ತೀಚೆಗೆ ಜಾರಿಗೆ ತಂದ ಡ್ರೋನ್‌ ನೀತಿಯಿಂದ ಮೀನುಗಾರರಿಗೆ ಅನುಕೂಲ ಇದೆ’ ಎಂದು ಮೋದಿ ಹೇಳಿದ್ದಾರೆ.

‘ಆದಿವಾಸಿಗಳನ್ನು ಅರಣ್ಯದಿಂದ ಹೊರಹಾಕಲು ಬಿಜೆಪಿ ಯತ್ನ’

ಮಹುವಾ (ಗುಜರಾತ್‌) (ಪಿಟಿಐ): ಭಾರತ್‌ ಜೋಡೊ ಯಾತ್ರೆಯ ಸಂದರ್ಭದಲ್ಲಿ ಭೇಟಿಯಾದ ಜನರಿಂದಾಗಿ ರೈತರು, ಯುವಜನರು ಮತ್ತು ಬುಡಕಟ್ಟು ಜನರ ನೋವು ಅರ್ಥವಾಯಿತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಅರಣ್ಯವನ್ನು ಕೈಗಾರಿಕೋದ್ಯಮಿಗಳಿಗೆ ನೀಡುವ ಮೂಲಕ ಆದಿವಾಸಿಗಳನ್ನು ನಿರ್ವಸಿತರನ್ನಾಗಿ ಮಾಡುವ ಕುತಂತ್ರವನ್ನು ಬಿಜೆ‍ಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಗುಜರಾತ್‌ ವಿಧಾನಸಭೆಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ರಾಹುಲ್ ಅವರು ಸೋಮವಾರ ಪ್ರಚಾರ ನಡೆಸಿದರು.

ಗುಜರಾತ್‌ ವಿಧಾನಸಭೆ ಚುನಾವಣೆಯ ಮೊದಲ ಪ್ರಚಾರ ಸಭೆಯಲ್ಲಿ ರಾಹುಲ್‌ ಭಾಗಿಯಾದರು. ಯಾತ್ರೆಯಿಂದ ಬಿಡುವು ಪಡೆದು ಅವರು ಚುನಾವಣಾ ಪ್ರಚಾರ ನಡೆಸಿದ್ದಾರೆ. ಆದಿವಾಸಿಗಳೇ ಈ ದೇಶದ ಮೊದಲ ಮಾಲೀಕರು. ಆದರೆ, ಬಿಜೆಪಿ ಅವರನ್ನು ಕಾಡಿನಿಂದ ಹೊರಗೆ ತರುವುದಕ್ಕಾಗಿ ಕೆಲಸ ಮಾಡುತ್ತಿದೆ. ಅವರ ಮಕ್ಕಳಿಗೆ ಆಧುನಿಕ ಶಿಕ್ಷಣ ದೊರೆಯದಂತೆ ನೋಡಿಕೊಳ್ಳುತ್ತಿದೆ ಎಂದು ರಾಹುಲ್ ಆಪಾದಿಸಿದ್ದಾರೆ.

ಯಾತ್ರೆಯ ಅನುಭವಗಳನ್ನೂ ಪ್ರಚಾರ ಭಾಷಣದ ಸಂದರ್ಭದಲ್ಲಿ ಅವರು ಹಂಚಿಕೊಂಡರು. ರೈತರು, ಯುವಜನರು ಮತ್ತು ಬುಡಕಟ್ಟು ಜನರ ಜೊತೆ ಮಾತನಾಡುವಾಗ ಬೇಸರವೂ ಆಗಿತ್ತು ಎಂಬುದನ್ನು ಅವರು ನೆನಪಿಸಿಕೊಂಡರು.

ತಮ್ಮ ಉತ್ಪನ್ನಗಳಿಗೆ ಸೂಕ್ತವಾದ ಬೆಲೆ ದೊರೆಯುತ್ತಿಲ್ಲ, ಬೆಳೆ ವಿಮೆ ಹಣ ಸಿಗುತ್ತಿಲ್ಲ ಅಥವಾ ತಮ್ಮ ಸಾಲ ಮನ್ನಾ ಆಗುತ್ತಿಲ್ಲ ಎಂದು ರೈತರು ಹೇಳಿದ್ದಾರೆ ಎಂಬುದನ್ನು ರಾಹುಲ್‌ ಹಂಚಿಕೊಂಡರು. ಯುವಜನರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ, ಅವರ ಕನಸುಗಳು ನನಸು ಆಗುತ್ತಿಲ್ಲ ಎಂದರು.

‘ನೀವು (ಆದಿವಾಸಿಗಳು) ಕಾಡಿನಲ್ಲಿಯೇ ಇರಬೇಕು ಎಂದು ಅವರು ಬಯಸುತ್ತಿದ್ದಾರೆ. ಆದರೆ, ಕಾಡನ್ನು ನಿಮ್ಮಿಂದ ಕಸಿದುಕೊಳ್ಳುತ್ತಾರೆ. ಇದು ಹೀಗೆಯೇ ಮುಂದುವರಿದರೆ, 5ರಿಂದ 10 ವರ್ಷಗಳಲ್ಲಿ ಎಲ್ಲ ಅರಣ್ಯ 2ರಿಂದ 3 ಕೈಗಾರಿಕೋದ್ಯಮಿಗಳ ಕೈಯಲ್ಲಿ ಇರುತ್ತದೆ’ ಎಂದು ರಾಹುಲ್‌ ಹೇಳಿದರು.

ಕಾಂಗ್ರೆಸ್ ಸರ್ಕಾರವು ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಬುಡಕಟ್ಟು ಸಮುದಾಯದ ಅನುಕೂಲಕ್ಕಾಗಿ ಜಾರಿಗೆ ತಂದ ಕಾಯ್ದೆಗಳನ್ನು ಬಿಜೆಪಿ ಆಳ್ವಿಕೆ ಇದ್ದ ರಾಜ್ಯಗಳು ಜಾರಿಗೆ ತರಲಿಲ್ಲ ಎಂದು ರಾಹುಲ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT