ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ಶೇ 30ರಷ್ಟು ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ?

Last Updated 24 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಮೂರು ದಶಕಗಳಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಆಡಳಿತ ವಿರೋಧಿ ಅಲೆಯಿಂದ ಪಾರಾಗಲು ಹಲವು ತಂತ್ರಗಳನ್ನು ಹೆಣೆಯುತ್ತಿದ್ದು ಹಾಲಿ ಶಾಸಕರಲ್ಲಿ ಹಲವರನ್ನು ಕೈಬಿಡಲು ಮತ್ತು ಶೇ 30ರಷ್ಟು ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್‌ ನೀಡಲು ಚಿಂತನೆ ನಡೆಸಿದೆ.

ದೀಪಾವಳಿ ರಜೆ ಬಳಿಕ ಗುಜರಾತ್ ವಿಧಾನಸಭೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು ಬಿಜೆಪಿಯು 182 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಭರದ ಸಿದ್ಧತೆ ನಡೆಸಿದೆ. ಪಕ್ಷದ ಮೂಲಗಳ ಪ್ರಕಾರ, ‘ಈವರೆಗೆ ಕಂಡಿಲ್ಲದಂಥ ಪಟ್ಟಿ’ಯನ್ನು ಪಕ್ಷದ ಹೈಕಮಾಂಡ್‌ ಸಿದ್ಧ ಪಡಿಸುತ್ತಿದೆ. ಹೀಗಾಗಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕಳೆದ ಎರಡು ದಿನಗಳಿಂದ ಪಕ್ಷದ ಮುಖಂಡರ ಜೊತೆ ‌ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಹೊಸಬರಿಗೆ ಮಣೆ: 182 ಕ್ಷೇತ್ರಗಳ ಪೈಕಿ 60ರಿಂದ 70 ಕ್ಷೇತ್ರಗಳಲ್ಲಿ (ಅಂದರೆ ಶೇ 30ರಿಂದ ಶೇ 40) ಹೊಸಬರನ್ನು ಅಭ್ಯರ್ಥಿಗಳನ್ನಾಗಿ ಮಾಡಲು ಪಕ್ಷ ಯೋಜಿಸಿದೆ. 2017ರಲ್ಲಿ ಜಯಗಳಿಸಿದ 99 ಶಾಸಕರ ಪೈಕಿ ಸುಮಾರು 25ರಿಂದ 30 ಶಾಸಕರಿಗೆ ಈ ಬಾರಿ ಟಿಕೆಟ್‌ ನೀಡದೆ ಇರಲು ಚಿಂತನೆ ನಡೆದಿದೆ. ಇವರಲ್ಲಿ ಕೆಲವರು ವಿಜಯ ರೂಪಾಣಿ ಅವರ ಸರ್ಕಾರದಲ್ಲಿ ಸಚಿವರೂ ಆಗಿದ್ದರು.

‘ಮೂರರಿಂದ ನಾಲ್ಕು ಬಾರಿ ಜಯಗಳಿಸಿದ ಹಿರಿಯರಿಗೂ ಈ ಬಾರಿ ಟಿಕೆಟ್‌ ನೀಡುವುದಿಲ್ಲ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿಯ ಗೌರವ ಯಾತ್ರೆಗೆ ಸಿಗದ ನಿರೀಕ್ಷಿತ ಜನಬೆಂಬಲ

ಗುಜರಾತ್‌ ಚುನಾವಣೆಯ ಪ್ರಚಾರವನ್ನು ‘ಗೌರವ ಯಾತ್ರೆ’ಯೊಂದಿಗೆ ಬಿಜೆಪಿ ಆರಂಭಿಸಿದೆ. ರಾಜ್ಯದ ಬಿಜೆಪಿ ನಾಯಕರು, ಕೇಂದ್ರ ಸಚಿವರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರೂ ನಿರೀಕ್ಷಿತ ಮಟ್ಟದ ಜನಸ್ಪಂದನೆ ಯಾತ್ರೆಗೆ ದೊರೆಯಲಿಲ್ಲ. ಯಾತ್ರೆಯ ಸಂದರ್ಭದಲ್ಲಿ ಜನರನ್ನು ಆಕರ್ಷಿಸಲು ರಾಜ್ಯದ ನಾಯಕರಿಗೆ ಸಾಧ್ಯವಾಗಿಲ್ಲ ಎಂಬುದು ಬಿಜೆಪಿ ವರಿಷ್ಠರ ಗಮನಕ್ಕೆ ಬಂದಿದೆ. ಯಾತ್ರೆಗೆ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಸಂದೇಶ ವರಿಷ್ಠರಿಗೆ ರವಾನೆಯಾಗಿದೆ.

2002ರಲ್ಲಿನ ಕೋಮು ಗಲಭೆಯ ಬಳಿಕ, ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ‘ಗೌರವ ಯಾತ್ರೆ’ಯನ್ನು ಪ್ರಾರಂಭಿಸಿದ್ದರು. ನಂತರ 2017ರಲ್ಲೂ ಬಿಜೆಪಿ ‘ಗೌರವ ಯಾತ್ರೆ’ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT