2002ರ ಗುಜರಾತ್ ಗಲಭೆ| ಮೋದಿಗೆ ಕ್ಲೀನ್ ಚಿಟ್: ‘ಸುಪ್ರೀಂ’ ಅಸ್ತು

ನವದೆಹಲಿ : ಗುಜರಾತ್‌ನಲ್ಲಿ 2002ರಲ್ಲಿ ನಡೆದಿದ್ದ ಗಲಭೆ, ಹಿಂಸಾಕೃತ್ಯಗಳ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡವು (ಎಸ್‌ಐಟಿ) ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ 63 ಜನರನ್ನು ಆರೋಪ ಮುಕ್ತಗೊಳಿಸಿದ್ದನ್ನು (ಕ್ಲೀನ್ ಚಿಟ್) ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.
ಗಲಭೆ, ಹಿಂಸಾಕೃತ್ಯಗಳ ಹಿಂದೆ ದೊಡ್ಡ ಸಂಚು ನಡೆದಿತ್ತು ಎಂದು ಆರೋಪಿಸಿ, ಹತ್ಯೆಗೀಡಾಗಿದ್ದ ಕಾಂಗ್ರೆಸ್ ನಾಯಕ ಎಹಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತು. ಈ ಮೂಲಕ ಹಿಂಸಾಕೃತ್ಯ
ಕುರಿತಂತೆ ತನಿಖೆಯನ್ನು ಪುನರಾರಂಭಿಸುವ ಸಾಧ್ಯತೆಗಳಿಗೆ ಕೋರ್ಟ್ ತೆರೆ ಎಳೆದಿದೆ.
ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠವು, ‘ಮುಸಲ್ಮಾನರ ವಿರುದ್ಧದ ಸಾಮೂಹಿಕವಾಗಿ ಹಿಂಸಾಕೃತ್ಯ ಕೈಗೊಳ್ಳಲು ಉನ್ನತ ಮಟ್ಟದಲ್ಲಿ ದೊಡ್ಡ ಸಂಚು ನಡೆಸಲಾಗಿತ್ತು. ಆ ಹಿಂಸಾಕೃತ್ಯ ಪೂರ್ವನಿಯೋಜಿತ ಎಂಬ ಆರೋಪವನ್ನು ತನಿಖೆಯ ಹಂತದಲ್ಲಿ ಸಂಗ್ರಹಿಸಿರುವ ಸಾಕ್ಷ್ಯಗಳು ಸಮರ್ಥಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು.
ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್ ಅವರೂ ಈ ಪೀಠದಲ್ಲಿದ್ದರು.
‘ಉದ್ರಿಕ್ತ ಪರಿಸ್ಥಿತಿ ನಿರಂತರವಾಗಿ ಇರುವಂತೆ ತಂತ್ರ ರೂಪಿಸಲಾಗಿತ್ತು’ ಎಂದು ಝಾಕಿಯಾ ಜಾಫ್ರಿ ಅವರ ಅರ್ಜಿಯಲ್ಲಿ ಹೇಳಲಾಗಿದೆ. ‘ಅರ್ಜಿಯು ವಿಚಾರಣೆಗೆ ಅರ್ಹವಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.
ದೊಡ್ಡ ಮಟ್ಟದ ಸಂಚು ನಡೆಸಲಾಗಿತ್ತು ಎಂಬ ಆರೋಪ ಕುರಿತಂತೆ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರ 64 ಜನರಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಈ ಹಿಂದೆ ಗುಜರಾತ್ ಹೈಕೋರ್ಟ್ ತಿರಸ್ಕರಿಸಿತ್ತು. ನಂತರ ಝಕಿಯಾ ಅವರು ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸಿದ್ದರು.
‘ಎಸ್ಐಟಿ ತನಿಖಾ ಕ್ರಮ ಮತ್ತು 2012ರ ಫೆಬ್ರುವರಿ 8ರಂದು ಸಲ್ಲಿಸಿದ್ದ ಅಂತಿಮ ವರದಿಯಲ್ಲಿ ಯಾವುದೇ ಲೋಪವನ್ನು ಗುರುತಿಸಲಾಗದು’ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿತು.
ಈ ಕುರಿತಂತೆ ಒಟ್ಟು 452 ಪುಟಗಳ ತೀರ್ಪು ನೀಡಿರುವ ನ್ಯಾಯಪೀಠವು, ‘ಎಸ್ಐಟಿ ಸಲ್ಲಿಸಿದ್ದ ಅಂತಿಮ ವರದಿಯನ್ನು ಈ ಹಿಂದೆ ಅಂಗೀಕರಿಸಿದ್ದ ಮ್ಯಾಜಿಸ್ಟ್ರೇಟ್ ಅವರ ತೀರ್ಮಾನ’ವನ್ನು ಎತ್ತಿಹಿಡಿಯಿತು.
ಗುಜರಾತ್‌ನ ಗೋಧ್ರಾದಲ್ಲಿ 2002ರಲ್ಲಿ ರೈಲಿಗೆ ಬೆಂಕಿ ಹಚ್ಚಲಾಗಿದ್ದ ಘಟನೆಯಲ್ಲಿ 59 ಜನರು ಮೃತಪಟ್ಟಿದ್ದರು. ಅದರ ಮಾರನೆಯ ದಿನ, ಫೆ. 28ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿ ಬಳಿ ನಡೆದಿದ್ದ ವ್ಯಾಪಕ ಹಿಂಸಾಚಾರದಲ್ಲಿ ಕಾಂಗ್ರೆಸ್ ಮುಖಂಡ ಎಹಸಾನ್ ಜಾಫ್ರಿ ಸೇರಿದಂತೆ 68 ಜನರು ಅಸುನೀಗಿದ್ದರು.
ತದನಂತರ ರಾಜ್ಯದಲ್ಲಿ ನಡೆದಿದ್ದ ಹಿಂಸಾಕೃತ್ಯಗಳಲ್ಲಿ 1,044 ಜನರು ಮೃತಪಟ್ಟಿದ್ದು, ಇವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮೇ 2005ರಲ್ಲಿ ಈ ಘಟನೆ ವಿವರ ನೀಡಿ, ‘ಹಿಂಸಾಕೃತ್ಯಗಳಲ್ಲಿ 254 ಹಿಂದೂಗಳು, 790 ಮುಸ್ಲಿಮರು ಮೃತಪಟ್ಟಿದ್ದರು’ ಎಂದು ತಿಳಿಸಿತ್ತು.
ತೀರ್ಪಿನಿಂದ ನಿರಾಸೆ
ಅಹಮದಾಬಾದ್ (ಪಿಟಿಐ): ‘ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ನಿರಾಶೆಯಾಗಿದೆ. ನಾನು ಭಾರತದಿಂದ ಹೊರಗಿರುವ ಕಾರಣ, ತೀರ್ಪನ್ನು ಅಧ್ಯಯನ ಮಾಡಿದ ನಂತರ ವಿವರವಾದ ಹೇಳಿಕೆ ನೀಡುತ್ತೇನೆ’ ಎಂದು ಕಾಂಗ್ರೆಸ್ ನಾಯಕ ಎಹಸಾನ್ ಜಾಫ್ರಿ ಅವರ ಪುತ್ರ ತನ್ವೀರ್ ಜಾಫ್ರಿ ಪ್ರತಿಕ್ರಿಯಿಸಿದ್ದಾರೆ.
‘ತನ್ವೀರ್ ಹಜ್ ಯಾತ್ರೆಗಾಗಿ ಮೆಕ್ಕಾದಲ್ಲಿದ್ದಾರೆ’ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.