ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದ್ವಾರದಲ್ಲಿ ದ್ವೇಷ ಭಾಷಣ: ಆರು ದಿನಗಳ ಬಳಿಕ ಎಫ್ಐಆರ್ ದಾಖಲು

ಇದುವರೆಗೆ ಯಾರನ್ನೂ ಬಂಧಿಸದ ಪೊಲೀಸರು
Last Updated 24 ಡಿಸೆಂಬರ್ 2021, 16:00 IST
ಅಕ್ಷರ ಗಾತ್ರ

ಲಖನೌ: ಹರಿದ್ವಾರದಲ್ಲಿ ಈಚೆಗೆ ನಡೆದ ‘ಧರ್ಮ ಸಂಸತ್’ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಭಾಷಣ ಮಾಡಿದವರ ವಿರುದ್ಧ ಆರು ದಿನಗಳ ಬಳಿಕ ಪೊಲೀಸರು ದೂರು ದಾಖಲಿಸಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಈಚೆಗಷ್ಟೇ ಹಿಂದೂ ಧರ್ಮವನ್ನು ಸ್ವೀಕರಿಸಿರುವ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸೀಂ ರಜ್ವಿ ಅಲಿಯಾಸ್ ಜಿತೇಂದ್ರ ನಾರಾಯಣ ತ್ಯಾಗಿ ಅವರು, ಧರ್ಮಸಂಸತ್ ಕಾರ್ಯಕ್ರಮದಲ್ಲಿನ ತಮ್ಮ ಭಾಷಣದಲ್ಲಿ ‘ಹಿಂದೂ ಧರ್ಮವನ್ನು ರಕ್ಷಿಸಲು ಹಾಗೂ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಹಿಂದೂ ಯುವಜನರು ಶಸ್ತ್ರಗಳನ್ನು ಕೈಗೆ ತೆಗೆದುಕೊಳ್ಳಬೇಕು’ ಎಂದು ಕರೆ ನೀಡಿದ್ದರು. ತ್ಯಾಗಿ ಅವರ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

‘ತ್ಯಾಗಿ ಮತ್ತು ಇತರರ ವಿರುದ್ಧ ಸೆಕ್ಷನ್ 153 (ಎ) ಅಡಿ ದೂರು ದಾಖಲಿಸಲಾಗಿದೆ. ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಗುಲ್‌ಬಹಾರ್ ಖಾನ್ ಎಂಬುವರು ದೂರು ದಾಖಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಹರಿದ್ವಾರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

ದೂರಿನ ಪ್ರಕಾರ, ‘ಡಿ. 17ರಿಂದ 19ರವರೆಗೆ ಹರಿದ್ವಾರದ ವೇದನಿಕೇತನ ಆಶ್ರಮದಲ್ಲಿ ಸ್ಥಳೀಯ ಯತಿ ನರಸಿಂಹಾನಂದ ಅವರು ಆಯೋಜಿಸಿದ್ದ ಧರ್ಮಸಂಸತ್ ಕಾರ್ಯಕ್ರಮದಲ್ಲಿ ಸಂತರು, ದಾರ್ಶನಿಕರು ಸೇರಿದಂತೆ ಬಿಜೆಪಿಯ ಕೆಲ ಮುಖಂಡರೂ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದ ವಿಡಿಯೊವೊಂದರಲ್ಲಿ ಹಿಂದೂ ಮಹಾಸಭಾದ ದಾರ್ಶನಿಕ ಮತ್ತು ಪದಾಧಿಕಾರಿ ಮಾ ಅನ್ನಪೂರ್ಣ ಅವರು, ‘ಹಿಂದೂ ಧರ್ಮವನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’. '‘ನನ್ನನ್ನು ನಾಥೂರಾಂ ಗೋಡ್ಸೆಯ ಬೆಂಬಲಿಗಳು ಎಂದು ಬ್ರ್ಯಾಂಡ್ ಮಾಡಿದರೂ ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ನನಗೆ ಅನಿಸಿದರೆ ನಾನು ಒಂದು ನಿಮಿಷವೂ ಯೋಚಿಸುವುದಿಲ್ಲ ಮತ್ತು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’ ಎಂದು ಹೇಳಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ, ಧರ್ಮದಾಸ್ ಮಹಾರಾಜಿ ಎನ್ನುವ ದಾರ್ಶನಿಕರೊಬ್ಬರು, ‘ತಾವು ಗೋಡ್ಸೆಯ ಹಿಂಬಾಲಕರಾಗಿದ್ದು, ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎದೆಗೆ ಆರು ಗುಂಡುಗಳನ್ನು ಹಾರಿಸುತ್ತಿದ್ದೆ’ ಎಂದಿದ್ದಾರೆ.

ಮತ್ತೊಬ್ಬ ದಾರ್ಶನಿಕ ಆನಂದ್ ಸ್ವರೂಪ್‌ಜಿ ಮಹಾರಾಜ್ ಅವರು ‘ಹಿಂದೂಗಳಿಗೆ ಹಿಂದೂ ರಾಷ್ಟ್ರ ನೀಡದಿದ್ದರೆ 1857ರ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಹೆಚ್ಚು ತೀವ್ರವಾದ ಯುದ್ಧವನ್ನು ಮಾಡುತ್ತಾರೆ. ಹರಿದ್ವಾರದಲ್ಲಿರುವ ಹೋಟೆಲ್ ಮಾಲೀಕರಿಗೆ ತಮ್ಮ ಆವರಣದಲ್ಲಿ ಕ್ರಿಸ್ಮಸ್ ಆಚರಣೆಗೆ ಅವಕಾಶ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿರುವುದು ಮತ್ತೊಂದು ವಿಡಿಯೊದಲ್ಲಿದೆ.

ಕಠಿಣ ಕ್ರಮಕ್ಕೆ ಪ್ರಿಯಾಂಕಾ ಒತ್ತಾಯ
ನವದೆಹಲಿ:
‘ಅಲ್ಪಸಂಖ್ಯಾತರು ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ವಿರುದ್ಧ ಸಶಸ್ತ್ರ ಹಿಂಸಾಚಾರವನ್ನು ಪ್ರಚೋದಿಸುವ ದ್ವೇಷದ ಭಾಷಣಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ವಿರೋಧಪಕ್ಷಗಳು ಶುಕ್ರವಾರ ಒತ್ತಾಯಿಸಿದ್ದು, ಇಂಥ ಹೇಳಿಕೆಗಳು ಸಂವಿಧಾನ ಮತ್ತು ಕಾನೂನನ್ನು ಉಲ್ಲಂಘಿಸುತ್ತವೆ ಎಂದೂ ಹೇಳಿದ್ದಾರೆ.

‘ಧರ್ಮ ಸಂಸತ್‌’ ಕಾರ್ಯಕ್ರಮದಲ್ಲಿನ ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಭಾಷಣವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿವಾದ್ರಾ, ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

‘ಇಂತಹ ಕೃತ್ಯಗಳು ಸಂವಿಧಾನ ಮತ್ತು ಕಾನೂನನ್ನು ಉಲ್ಲಂಘಿಸುತ್ತವೆ. ಮಾಜಿ ಪ್ರಧಾನಿಯ ಹತ್ಯೆ ಹಾಗೂ ವಿವಿಧ ಸಮುದಾಯಗಳ ನಡುವೆ ದ್ವೇಷ ಹಾಗೂ ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿದ್ವಾರ ಜಿಲ್ಲೆಯ ಜ್ವಾಲಾಪುರ ಪೊಲೀಸ್ ಠಾಣೆಯಲ್ಲಿತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT