ಮಂಗಳವಾರ, ಆಗಸ್ಟ್ 3, 2021
24 °C

ಜು.26ರವರೆಗೆ ಒಂದು ವಾರ ಲಾಕ್‌ಡೌನ್ ವಿಸ್ತರಿಸಿದ ಹರಿಯಾಣ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಢ: ಹರಿಯಾಣ ಸರ್ಕಾರವು ರಾಜ್ಯದಲ್ಲಿ ಲಾಕ್‌ಡೌನ್ ಅನ್ನು ಜು.26 ರವರೆಗೆ ಮತ್ತೊಂದು ವಾರ ವಿಸ್ತರಿಸಿದ್ದು, ಇದೇ ವೇಳೆ ರೆಸ್ಟೊರೆಂಟ್‌‌ಗಳು, ಬಾರ್‌‌ಗಳು ಮತ್ತು ಕ್ಲಬ್‌ಗಳನ್ನು ಒಂದು ಗಂಟೆ ಹೆಚ್ಚು ಅಂದರೆ ರಾತ್ರಿ 11 ಗಂಟೆಯವರೆಗೂ ತೆರೆಯಲು ಅವಕಾಶ ನೀಡಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ವರ್ಧನ್ ಹೊರಡಿಸಿರುವ ಆದೇಶದಲ್ಲಿ, 'ದಿ ಮಹಾಮಾರಿ ಅಲರ್ಟ್-ಸುರಕ್ಷಿತ್ ಹರಿಯಾಣ'ವನ್ನು ಮತ್ತೊಂದು ವಾರ ವಿಸ್ತರಿಸಲಾಗಿದ್ದು, ಜು. 19ರ ಬೆಳಗ್ಗೆ 5ರಿಂದ ಜು.26ರ ಬೆಳಗ್ಗೆ 5ರವರೆಗೆ ಜಾರಿಯಲ್ಲಿರಲಿದೆ' ಎಂದು ತಿಳಿಸಿದೆ.

ಹೋಟೆಲ್‌ಗಳು ಮತ್ತು ಮಾಲ್‌ಗಳು ಸೇರಿದಂತೆ ರೆಸ್ಟೊರೆಂಟ್‌ಗಳು ಮತ್ತು ಬಾರ್‌ಗಳನ್ನು ಬೆಳಗ್ಗೆ 10ರಿಂದ ರಾತ್ರಿ 11 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಈ ಹಿಂದೆ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಶೇ.50ರಷ್ಟು ಸಾಮರ್ಥ್ಯದೊಂದಿಗೆ ತೆರೆಯಲು ಅವಕಾಶ ನೀಡಲಾಗಿತ್ತು. ಈ ಹೇಳಿಕೆಯನ್ನು ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಹೊರಡಿಸಲಾಗಿದೆ.

ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಫಾಸ್ಟ್ ಫುಡ್ ಜಾಯಿಂಟ್‌ಗಳಿಂದ ಹೋಂ ಡೆಲಿವರಿ ಮಾಡಲು ರಾತ್ರಿ 11ರವರೆಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 10 ರಿಂದ ರಾತ್ರಿ 11 ರವರೆಗೆ ಕ್ಲಬ್ ಹೌಸ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಗಾಲ್ಫ್ ಕೋರ್ಸ್‌ಗಳ ಬಾರ್‌ಗಳನ್ನು ಶೇ 50ರಷ್ಟು ಆಸನ ಸಾಮರ್ಥ್ಯದೊಂದಿಗೆ ತೆರೆಯಬಹುದು. ಶೇ 50ರಷ್ಟು ಸಾಮರ್ಥ್ಯದೊಂದಿಗೆ ಜಿಮ್‌ಗಳನ್ನು ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ ತೆರೆಯಲು ಅವಕಾಶವಿದೆ. ಆದರೆ ಅಂತರ ಕಾಯ್ದುಕೊಳ್ಳುವಿಕೆ, ಆವರಣದ ನೈರ್ಮಲ್ಯ ಮತ್ತು ಇತರ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಾರದ ಎಲ್ಲಾ ದಿನಗಳಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗುವುದು ಎಂದು ತಿಳಿಸಿದೆ. ಈ ಮೊದಲು ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಇತ್ತು. ಈಮಧ್ಯೆ, ಅಂಗಡಿಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಧಾರ್ಮಿಕ ಸ್ಥಳಗಳು, ಕಾರ್ಪೊರೇಟ್ ಕಚೇರಿಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಲಾಕ್‌ಡೌನ್ ಸಡಿಲಿಕೆ ಈಗಾಗಲೇ ಜಾರಿಯಲ್ಲಿದೆ.

ಲಾಕ್‌ಡೌನ್‌ ಅನ್ನು 'ಮಹಾಮಾರಿ ಅಲರ್ಟ್-ಸುರಕ್ಷಿತ್ ಹರಿಯಾಣ (ಸಾಂಕ್ರಾಮಿಕ ಎಚ್ಚರಿಕೆ-ಸುರಕ್ಷಿತ ಹರಿಯಾಣ)' ಎಂದು ರಾಜ್ಯ ಸರ್ಕಾರ ಹೇಳಿದೆ. ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಮೇ 3 ರಂದು ಹರಿಯಾಣ ಸರ್ಕಾರ ಲಾಕ್‌ಡೌನ್ ವಿಧಿಸಿತ್ತು. ಇದೀಗ ಹನ್ನೊಂದನೇ ಬಾರಿಗೆ ಲಾಕ್‌ಡೌನ್‌ ಅನ್ನು ವಿಸ್ತರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು