ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಮಹಿಳೆಗೆ ನಿರೀಕ್ಷಣಾ ಜಾಮೀನು ಮಂಜೂರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿ ಮಹಿಳೆಗೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈಗಾಗಲೇ ಮಹಿಳೆ ವಿಚಾರಣೆಗೆ ಹಾಜರಾಗಿದ್ದು, ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದೆ.

ಅಪ್ರಾಪ್ತನ ತಾಯಿ ನೀಡಿದ ದೂರಿನ ಮೇರೆಗೆ ಮಹಿಳೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕನು ಆತನ ತಂದೆಯೊಂದಿಗೆ ಇದ್ದಾಗ ಆಗಾಗ ಮನೆಗೆ ಭೇಟಿ ನೀಡುತ್ತಿದ್ದ ಆರೋಪಿ ಮಹಿಳೆಯು ತನ್ನ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ದೂರಿದ್ದಾರೆ.

ಲೈಂಗಿಕ ದೌರ್ಜನ್ಯದಿಂದಾಗಿ ಮಗನಿಗಾಗಿದ್ದ ಗಾಯವನ್ನು ಸಾಬೀತುಪಡಿಸಲು ತಾಯಿ ನೀಡಿದ್ದ ವೈದ್ಯಕೀಯ ದಾಖಲೆಗಳು ಅಸಲಿಯಲ್ಲ ಎಂಬುದನ್ನು ಕಂಡುಕೊಂಡ ನ್ಯಾಯಮೂರ್ತಿ ರಜನೀಶ್ ಭಟ್ನಾಗರ್, ಸಹಾಯಕ ಪ್ರಾಧ್ಯಾಪಕಿಯಾಗಿರುವ ಆರೋಪಿ ಮಹಿಳೆಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

ಬಾಲಕನ ತಾಯಿಯು ಸಲ್ಲಿಸಿರುವ ವೈದ್ಯಕೀಯ ದಾಖಲೆಗಳು ಆಕೆ ಮಾಡಿರುವ ಆರೋಪಗಳಿಗೆ ಪೂರಕವಾಗಿಲ್ಲ ಎಂದಿರುವ ನ್ಯಾಯಾಲಯ, ತಾಯಿಯು 'ಭವಿಷ್ಯದಲ್ಲಿ ಇಂತಹ ಪ್ರಯತ್ನಗಳಲ್ಲಿ' ತನ್ನನ್ನು ತೊಡಗಿಸಿಕೊಳ್ಳದಂತೆ ತಾಕೀತು ಮಾಡಿದೆ.

ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಬಾಲಕನ ತಾಯಿ ದೂರು ನೀಡಿದ್ದಾರೆ. ಮಗುವಿನ ತಂದೆ ಈಗಾಗಲೇ 2019 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದ ಆರೋಪಿ ಮಹಿಳೆ, ನಿರೀಕ್ಷಣಾ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು.

ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ತನಕ ದೇಶವನ್ನು ತೊರೆಯದಂತೆ ಮತ್ತು ಬಾಲಕನ ಹೇಳಿಕೆಯನ್ನು ದಾಖಲಿಸುವವರೆಗೂ ಮಗುವನ್ನು ಭೇಟಿಯಾಗದಂತೆ ನ್ಯಾಯಾಲಯ ಸೂಚಿಸಿದೆ. ಇದಲ್ಲದೆ, ಆರೋಪಿಯು ಬಾಲಕನ ತಾಯಿಯ ಮನೆ ಅಥವಾ ಮಗುವಿನ ಶಾಲೆಗೆ ಭೇಟಿ ನೀಡಬಾರದು ಎಂದು ಅದು ಹೇಳಿದೆ.

ಬಾಲಕನ ತಾಯಿ ನೀಡಿದ್ದ ದೂರಿನಲ್ಲಿ, ತನ್ನ ಪತಿ ಮತ್ತು ಆರೋಪಿ ಮಹಿಳೆ ಸಹೋದ್ಯೋಗಿಗಳಾಗಿದ್ದು, ಇಬ್ಬರೂ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು