ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್ ಅಪಘಾತ: ಕಾರಣ ಇನ್ನಷ್ಟೇ ಪತ್ತೆಯಾಗಬೇಕು- ವಾಯುಪಡೆ

Last Updated 9 ಡಿಸೆಂಬರ್ 2021, 1:43 IST
ಅಕ್ಷರ ಗಾತ್ರ

ನವದೆಹಲಿ:ಸಿಡಿಎಸ್‌ ಬಿಪಿನ್ ರಾವತ್ ಅವರು ಸಂಚರಿಸುತ್ತಿದ್ದ ಎಂಐ–17ವಿ5 ಹೆಲಿಕಾಪ್ಟರ್‌ ಪತನಕ್ಕೆ ನಿಖರ ಕಾರಣವನ್ನು ಇನ್ನಷ್ಟೇ ಪತ್ತೆಮಾಡಬೇಕಿದೆ ಎಂದು ಭಾರತೀಯ ವಾಯುಪಡೆ ಹೇಳಿದೆ.

ಪ್ರತಿಕೂಲ ಹವಾಮಾನದ ಕಾರಣ ಹೆಲಿಕಾಪ್ಟರ್‌ ಪತನವಾಗಿರಬಹುದು ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಚರ್ಚೆಯಾಗುತ್ತಿದೆ.

ಆದರೆ, ರಷ್ಯಾ ನಿರ್ಮಿತ ಎಂಐ–17ವಿ5 ಹೆಲಿಕಾಪ್ಟರ್ ತನ್ನ ವರ್ಗದಲ್ಲೇ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೆಲಿಕಾಪ್ಟರ್‌ ಎನಿಸಿಕೊಂಡಿದೆ. ಸಣ್ಣಪುಟ್ಟ ಕಾರಣಗಳಿಗೆ ಈ ಹೆಲಿಕಾಪ್ಟರ್‌ ಪತನವಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳಿದ್ದಾರೆ.

ಮಳೆ, ಮೋಡ ಮುಸುಕಿದಂತಹ ಪ್ರತಿಕೂಲ ಹವಾಮಾನದಲ್ಲಿಯೂ ಸಂಚರಿಸಲು ಅನುವು ಮಾಡಿಕೊಡುವ ಹವಾಮಾನ ರೇಡಾರ್‌ ಈ ಹೆಲಿಕಾಪ್ಟರ್‌ನಲ್ಲಿದೆ. ಅಲ್ಲದೆ, ಅಪಘಾತದ ಸಂದರ್ಭದಲ್ಲಿ ಇಂಧನ ಟ್ಯಾಂಕ್‌ ಸಿಡಿಯುವುದನ್ನು ತಡೆಯುವ ವಿಶೇಷ ಕವಚವನ್ನು ಈ ಹೆಲಿಕಾಪ್ಟರ್‌ನ ಇಂಧನ ಟ್ಯಾಂಕ್‌ಗೆ ಅಳವಡಿಸಲಾಗಿರುತ್ತದೆ.ಈ ಹೆಲಿಕಾಪ್ಟರ್‌ನಲ್ಲಿ ಅತ್ಯಾಧುನಿಕವಾದ ಏವಿಯಾನಿಕ್ಸ್ ವ್ಯವಸ್ಥೆ ಇದೆ. ಹೀಗಾಗಿ ಇದು ಪ್ರತಿಕೂಲ ಹವಾಮಾನದ ಕಾರಣದಿಂದ ಪತನವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ವಾಯುಪಡೆಯ ನಿವೃತ್ತ ಏರ್‌ಮಾರ್ಷಲ್ ಆರ್‌.ಎಸ್‌.ಒಬೆರಾಯ್ ವಿಶ್ಲೇಷಿಸಿದ್ದಾರೆ.

ಹೆಲಿಕಾಪ್ಟರ್ ಪತನವಾಗಿರುವ ಕೂನೂರು, ನೀಲಗಿರಿ ಪರ್ವತ ಪ್ರದೇಶದಲ್ಲಿದೆ. ಸಮುದ್ರಮಟ್ಟದಿಂದ 1,850 ಮೀಟರ್‌ನಷ್ಟು ಎತ್ತರದಲ್ಲಿ ಕೂನೂರು ಇದೆ. ಅವಘಡ ಸಂಭವಿಸಿದ ಸಮಯದಲ್ಲಿ ಈ ಪ್ರದೇಶದಲ್ಲಿ ಬೀಸುತ್ತಿದ್ದ ಗಾಳಿಯ ವೇಗ ಪ್ರತಿ ಗಂಟೆಗೆ 8 ಕಿ.ಮೀ.ನಷ್ಟು ಮಾತ್ರವಿತ್ತು. ಹೀಗಾಗಿ ಬಿರುಗಾಳಿಯ ಕಾರಣಕ್ಕೆ ಹೆಲಿಕಾಪ್ಟರ್ ಪತನವಾಗಿರುವ ಸಾಧ್ಯತೆ ಇಲ್ಲ. ಅವಘಡ ಸಂಭವಿಸಿದಾಗ ಕೂನೂರು ಪ್ರದೇಶದಲ್ಲಿ ತುಂತುರು ಮಳೆಯಷ್ಟೇ ಆಗುತ್ತಿತ್ತು. ಹೀಗಾಗಿ ಮಳೆಯ ಕಾರಣಕ್ಕೆ ಹೆಲಿಕಾಪ್ಟರ್‌ ಪತನವಾಗಿರುವ ಸಾಧ್ಯತೆ ತೀರಾ ಕಡಿಮೆ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಹೆಲಿಕಾಪ್ಟರ್‌ಗೆ ಆಕಾಶದಲ್ಲಿಯೇ ಬೆಂಕಿ ಹೊತ್ತಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ’ ಎಂದು ಎಎನ್‌ಐ ಸುದ್ದಿಸಂಸ್ಥೆ ತನ್ನ ವಿಡಿಯೊ ಟ್ವೀಟ್‌ನಲ್ಲಿ ಹೇಳಿದೆ. ಇದು ನಿಜವೇ ಆಗಿದ್ದರೆ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬುದನ್ನು ಪತ್ತೆ ಮಾಡಬೇಕಾಗುತ್ತದೆ. ಈ ಹೆಲಿಕಾಪ್ಟರ್‌ ಮೈನಸ್ 50 ಡಿಗ್ರಿ ಸೆಲ್ಸಿಯಸ್‌ನಷ್ಟು ಥಂಡಿಯ ವಾತಾವರಣದಿಂದ 50 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡುಬಿಸಿಯ ವಾತಾವರಣದಲ್ಲಿ ಕಾರ್ಯಾಚರಣೆ ಮಾಡುವ ಸಾಮರ್ಥ್ಯ ಹೊಂದಿದೆ. ತೀರಾ ದೂರದ ಪ್ರಯಾಣದ ವೇಳೆ ಎಂಜಿನ್‌ನ ಉಷ್ಣತೆಯು ಇಂಧನ ಟ್ಯಾಂಕ್‌ಗೆ ತಾಗದೇ ಇರುವ ರೀತಿಯಲ್ಲಿ ಉಷ್ಣ ನಿರೋಧಕ ವ್ಯವಸ್ಥೆಯನ್ನು ಈ ಹೆಲಿಕಾಪ್ಟರ್‌ ಹೊಂದಿದೆ. ಅಪಘಾತ ಸಂಭವಿಸಿದ ವೇಳೆ ಕೂನೂರಿನಲ್ಲಿ 20 ಡಿಗ್ರಿ ಸೆಲ್ಸಿಯಸ್‌ನಷ್ಟು ಮಾತ್ರ ಉಷ್ಣಾಂಶವಿತ್ತು. ಹೀಗಾಗಿ ಉಷ್ಣತೆಯ ಕಾರಣಕ್ಕೆ ಹೆಲಿಕಾಪ್ಟರ್‌ಗೆ ಬೆಂಕಿಹೊತ್ತಿಕೊಂಡಿರುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು’ ಎಂದು ಅವರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT