ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೇನಾ ಹೆಲಿಕಾಪ್ಟರ್‌ ಪತನ: ತನಿಖೆಗೆ ಏರ್‌ಮಾರ್ಷಲ್‌ ನೇತೃತ್ವ

ಸೇನಾ ಹೆಲಿಕಾಪ್ಟರ್‌ ಪತನ: ದೆಹಲಿ ತಲುಪಿದ ಮೃತದೇಹಗಳು
Last Updated 9 ಡಿಸೆಂಬರ್ 2021, 19:39 IST
ಅಕ್ಷರ ಗಾತ್ರ

ಕೂನೂರು/ನವದೆಹಲಿ: ತಮಿಳುನಾಡಿನ ಕೂನೂರು ಸಮೀಪ ಬುಧವಾರ ಸೇನಾ ಹೆಲಿಕಾಪ್ಟರ್‌ ಪತನಗೊಂಡ ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸಲಿದೆ. ಏರ್‌ ಮಾರ್ಷಲ್‌ ಮಾನವೇಂದ್ರ ಸಿಂಗ್‌ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.

ತನಿಖಾಧಿಕಾರಿಗಳ ತಂಡವು ವೆಲ್ಲಿಂಗ್ಟನ್‌ಗೆ ಬುಧವಾರವೇ ತಲುಪಿದೆ. ಅವರು ತನಿಖೆಯನ್ನೂ ಆರಂಭಿಸಿದ್ದಾರೆ ಎಂದು ರಾಜನಾಥ್‌ ಅವರು ತಿಳಿಸಿದ್ದಾರೆ.

ಪತನಗೊಂಡ ಹೆಲಿಕಾಪ್ಟರ್‌ನ ಹಾರಾಟ ದತ್ತಾಂಶ ದಾಖಲಾಗಿರುವ ಬ್ಲ್ಯಾಕ್‌ ಬಾಕ್ಸ್‌ ಗುರುವಾರ ಸಿಕ್ಕಿದೆ. ಪತನಕ್ಕೆ ಸಂಬಂಧಿಸಿ ಮಹತ್ವದ ಸುಳಿವುಗಳು ಬ್ಲ್ಯಾಕ್‌ ಬಾಕ್ಸ್‌ನಿಂದ ಸಿಗುವ ಸಾಧ್ಯತೆ ಇದೆ. ಸೇನಾ ಪಡೆಗಳ ಮೊದಲ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌ ಮತ್ತು ಇತರ 12 ಮಂದಿ ಹೆಲಿಕಾಪ್ಟರ್‌ ಪತನದಲ್ಲಿ ಮೃತಪಟ್ಟಿದ್ದಾರೆ.

ಪತನದ ಸ್ಥಳದ 300 ಮೀಟರ್‌ ವ್ಯಾಪ್ತಿಯಲ್ಲಿ ನಡೆಸುತ್ತಿದ್ದ ಶೋಧವನ್ನು ಅಧಿಕಾರಿಗಳು ಒಂದು ಕಿ.ಮೀ.ಗೆ ವಿಸ್ತರಿಸಿದ ಬಳಿಕ ಬ್ಲ್ಯಾಕ್‌ ಬಾಕ್ಸ್‌ ಸೇರಿ ಎರಡು ಪೆಟ್ಟಿಗೆಗಳು ಸಿಕ್ಕಿವೆ. ಈ ಪೆಟ್ಟಿಗೆಗಳನ್ನು ದೆಹಲಿ ಅಥವಾ ಬೆಂಗಳೂರಿಗೆ ಒಯ್ದು, ಅದರಲ್ಲಿರುವ ದತ್ತಾಂಶಗಳನ್ನು ಸಂಗ್ರಹಿಸಿ, ಹೆಲಿಕಾಪ್ಟರ್‌ ಪತನದ ಕಾರಣ ಕಂಡು ಹಿಡಿಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರ್ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರ ಸ್ಥಿತಿ ಗಂಭೀರವಾಗಿದೆ. ಅವರು ಜೀವ ರಕ್ಷಕ ವ್ಯವಸ್ಥೆಯಲ್ಲಿಇದ್ದಾರೆ. ಪತನದ ಸ್ಥಳದಿಂದ ಆರು ಕಿ.ಮೀ. ದೂರದ ವೆಲ್ಲಿಂಗ್ಟನ್‌ನಲ್ಲಿ ಇರುವ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿಅವರನ್ನು ಬೆಂಗಳೂರಿ ಕಮಾಂಡ್‌ ಆಸ್ಪತ್ರೆಗೆ ಗುರುವಾರ ಸ್ಥಳಾಂತರಿಸಲಾಗಿದೆ.

ದೂರು ದಾಖಲು: ತಮಿಳುನಾಡು ಪೊಲೀಸರುಹೆಲಿಕಾಪ್ಟರ್‌ ಪತನಕ್ಕೆಸಂಬಂಧಿಸಿ ದೂರು ದಾಖಲಿಸಿಕೊಂಡಿ
ದ್ದಾರೆ. ತನಿಖೆಯನ್ನೂ ಆರಂಭಿಸಿದ್ದಾರೆ. ತನಿಖೆಗಾಗಿ ಡ್ರೋನ್‌ಗಳನ್ನೂ ಬಳಸಲಾಗುತ್ತಿದೆ.

ಗೌರವ ಅರ್ಪಣೆ:

ಸೇನೆಯ ಅಲಂಕೃತ ವಾಹನಗಳಲ್ಲಿ ಮೃತ ದೇಹಗಳನ್ನು ವೆಲ್ಲಿಂಗ್ಟನ್‌ನಲ್ಲಿರುವ ಮದ್ರಾಸ್‌ ರೆಜಿಮೆಂಟ್‌ ಕೇಂದ್ರಕ್ಕೆ ಒಯ್ಯಲಾಯಿತು. ಅಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ತೆಲಂಗಾಣ ರಾಜ್ಯಪಾಲೆ ತಮಿಳುಸಾಯಿ ಸೌಂದರರಾಜನ್‌,
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ತಮಿಳುನಾಡಿನ ಕೆಲ ಸಚಿವರು, ಸೇನೆಯ ಹಿರಿಯ ಅಧಿಕಾರಿಗಳು, ಹಲವು ನಿವೃತ್ತ ಅಧಿಕಾರಿಗಳು ಹೂಗುಚ್ಛ ಇರಿಸಿ ಗೌರವ ಸಲ್ಲಿಸಿದರು. ಬಳಿಕ, ಮೃತ ದೇಹಗಳನ್ನು ರಸ್ತೆ ಮೂಲಕ ಕೊಯಮತ್ತೂರಿಗೆ ತರಲಾಯಿತು. ಅಲ್ಲಿಂದ, ವಾಯುಪಡೆಯ ವಿಶೇಷ ವಿಮಾನದಲ್ಲಿ ದೆಹಲಿಗೆ ಒಯ್ಯಲಾಯಿತು.

ಸಂಸತ್ತಿನ ಉಭಯ ಸದನಗಳಲ್ಲಿ ಮೌನ ಆಚರಿಸಿ, ಮೃತರಿಗೆ ಗೌರವ ಸಲ್ಲಿಸಲಾಗಿದೆ. ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ರಾವತ್‌ ಮತ್ತು ಇತರರ ಅಕಾಲಿಕ ಮರಣಕ್ಕೆ ದುಃಖ ವ್ಯಕ್ತಪಡಿಸಿದರು. ಕುಶಲ ಯೋಧ, ಅಸಾಮಾನ್ಯ ಕಾರ್ಯತಂತ್ರಗಾರ ಮತ್ತು ಅನುಭವಿ ನಾಯಕನನ್ನು ದೇಶವು ಕಳೆದುಕೊಂಡಿದೆ ಎಂದರು.ರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ಅವರು ರಾವತ್‌ ಅವರ ನಾಲ್ಕು ದಶಕಗಳ ಸಾಧನೆಯನ್ನು ಬಣ್ಣಿಸಿದರು.

ವಿರಳ ತನಿಖೆ:

ಹೆಲಿಕಾಪ್ಟರ್‌ ಅಥವಾ ವಿಮಾನ ಪತನದಂತಹ ದುರಂತದ ಬಗ್ಗೆ ಮೂರೂ ಪಡೆಗಳ ಸದಸ್ಯರು ಇರುವ ಸಮಿತಿಯಿಂದ ತನಿಖೆ ನಡೆಸುವುದು ವಿರಳಾತಿ ವಿರಳ. ಈ ಸಮಿತಿಯು ಹಾರಾಟದ ಮಾರ್ಗ, ಹಾರಾಟದ ಸ್ಥಿತಿಗತಿ, ಸಂಭವಿಸಿರಬಹುದಾದ ತಾಂತ್ರಿಕ ಸಮಸ್ಯೆಗಳು, ದಿಢೀರ್‌ ಕೆಳಕ್ಕೆ ಉರುಳಲು ಕಾರಣ ಇತ್ಯಾದಿ ವಿಚಾರಗಳಿಗೆ ಗಮನ ಹರಿಸಲಿದೆ.

ಹೆಲಿಕಾಪ್ಟರ್‌ ಹಾರಾಟ ನಡೆಸುತ್ತಿದ್ದ ವಿಂಗ್‌ ಕಮಾಂಡರ್‌ ಪೃಥ್ವಿ ಸಿಂಗ್‌ ಚೌಹಾಣ್‌ ಅವರು ಸೂಲೂರಿನ 109 ಹೆಲಿಕಾಪ್ಟರ್‌ ಘಟಕದ ಕಮಾಂಡಿಂಗ್‌ ಅಧಿಕಾರಿ
ಯಾಗಿದ್ದವರು. ಅವರಿಗೆ ಎರಡು ದಶಕಗಳ ಹೆಲಿಕಾಪ್ಟರ್‌ ಹಾರಾಟದ ಅನುಭವ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT