ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲಪ್ರದೇಶ: ಕಾಂಗ್ರೆಸ್‌ ಪ್ರಚಾರಕ್ಕೆ ಪ್ರಿಯಾಂಕಾ ಗಾಂಧಿ ನೇತೃತ್ವ

Last Updated 24 ಅಕ್ಟೋಬರ್ 2022, 13:31 IST
ಅಕ್ಷರ ಗಾತ್ರ

ನವದೆಹಲಿ:ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಠಾಕೂರ್ ನೇತೃತ್ವದ ಬಿಜೆಪಿ ಸರ್ಕಾರ ಉರುಳಿಸುವ ಭರವಸೆ ಹೊಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಚುನಾವಣಾ ಪ್ರಚಾರವನ್ನು ಮುನ್ನಡೆಸಲಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಕ್ಷ ಕೈಗೊಂಡಿರುವ ‘ಭಾರತ್‌ ಜೋಡೊ ಯಾತ್ರೆ’ಯಲ್ಲಿ ರಾಹುಲ್‌ ಗಾಂಧಿ ತೊಡಗಿಸಿಕೊಂಡಿರುವುದರಿಂದ ಅವರು ಗುಡ್ಡಗಾಡು ರಾಜ್ಯವನ್ನು ಚುನಾವಣೆ ವೇಳೆಗೆ ತಲುಪಲು ಕಷ್ಟವಾಗಲಿದೆ. ಹಾಗಾಗಿ ಹಿಮಾಚಲಪ್ರದೇಶದಲ್ಲಿ ಚುನಾವಣಾ ಪ್ರಚಾರ ಮುನ್ನಡೆಸುವ ಜವಾಬ್ದಾರಿಯನ್ನು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಹೆಗಲಿಗೆ ವರ್ಗಾಯಿಸಿದ್ದಾರೆ. ಆದಾಗ್ಯೂ ಮುಂದೆ ಎದುರಾಗುವ ರಾಜಕೀಯ ಸನ್ನಿವೇಶ ಆಧರಿಸಿ ರಾಹುಲ್‌ ತಮ್ಮ ನಿರ್ಧಾರ ಬದಲಿಸಿ, ಕೊನೆ ಹಂತದಲ್ಲಿ ಪ್ರಚಾರದಲ್ಲಿ ಭಾಗವಹಿಸಿದರೂ ಅಚ್ಚರಿ ಇಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.

ಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಕೊನೆಗೊಂಡ ಮರು ದಿನವೇಅ.31ರಿಂದ ಪ್ರಿಯಾಂಕಾ ಗಾಂಧಿ ಅವರು ಎಂಟು ರ‍್ಯಾಲಿಗಳು ಮತ್ತು ರೋಡ್‌ ಶೋಗಳಲ್ಲಿ ಭಾಗವಹಿಸಲಿದ್ದಾರೆ.ಅ.31ರಂದು ಮಂಡಿ ಮತ್ತು ಕಲ್ಲು, ನ.3ರಂದು ಕಾಂಗ್ರಾ ಮತ್ತು ಚಂಬಾ ಹಾಗೂ ನ.7ರಂದು ಹಮಿರ್‌ಪುರ್‌ ಮತ್ತು ಉನಾದಲ್ಲಿ ಪ್ರಚಾರ ಮಾಡಲಿದ್ದಾರೆ. ಹಾಗೆಯೇ ನ.12ರ ಚುನಾವಣೆಗೆ ಮುನ್ನ ಪ್ರಚಾರದ ಕೊನೆ ದಿನವಾದ ನ.10 ರಂದು ಶಿಮ್ಲಾ ಮತ್ತು ಸಿರ್ಮೌರ್‌ನಲ್ಲಿ ಪ್ರಿಯಾಂಕಾ ರ‍್ಯಾಲಿ ನಡೆಸಲಿದ್ದಾರೆ.

ರಾಜ್ಯದಲ್ಲಿ ಮರಳಿ ಅಧಿಕಾರ ಪಡೆಯುವ ಪ್ರಯತ್ನದಲ್ಲಿರುವ ಕಾಂಗ್ರೆಸ್‌ಗೆ ವೀರಭದ್ರಸಿಂಗ್ ಅವರಂತಹ ವರ್ಚಸ್ವಿ ನಾಯಕನ ಅನುಪಸ್ಥಿತಿ ಕಾಡುತ್ತಿದೆ. ಅವರ ನಿಧನದ ನಂತರ ಅವರ ಪತ್ನಿ, ಸಂಸದೆ ಪ್ರತಿಭಾ ಸಿಂಗ್ ಅವರು ರಾಜ್ಯ ಘಟಕದ ನೇತೃತ್ವ ವಹಿಸಿಕೊಂಡು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.

ಎಐಸಿಸಿ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ, ಚುನಾಯಿತ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರರನ್ನು ಒಳಗೊಂಡ 40 ತಾರಾ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್‌ ಈಗಾಗಲೇ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT