ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ಹತ್ಯೆಗೆ ಕರೆ, ಭಾರತೀಯ ನಾಯಕರ ಮೌನ: ದಿ ನ್ಯೂಯಾರ್ಕ್‌ ಟೈಮ್ಸ್‌

20 ಲಕ್ಷ ಮಂದಿಯನ್ನು ಕೊಲ್ಲಲು ನಾವು ನೂರು ಮಂದಿ ಸಿದ್ಧರಿದ್ದರೆ ಹಿಂದೂ ರಾಷ್ಟ್ರ ಸಾಧ್ಯ: ಪೂಜಾ ಶಕುನ್‌ ಪಾಂಡೆ
Last Updated 25 ಡಿಸೆಂಬರ್ 2021, 9:54 IST
ಅಕ್ಷರ ಗಾತ್ರ

ದಿ ನ್ಯೂಯಾರ್ಕ್‌ ಟೈಮ್ಸ್‌:'ಸಂವಿಧಾನ ಬದ್ಧ ಜಾತ್ಯಾತೀತ ಪ್ರಜಾಧಿಪತ್ಯ ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ. ಇದಕ್ಕಾಗಿ ಪ್ರಾಣ ನೀಡುವುದು ಮತ್ತು ಪ್ರಾಣ ತೆಗೆಯುವುದು ಅವಶ್ಯಕವಾಗಿದೆ' ಎಂದು ನೂರಾರು ಹಿಂದೂ ಕಾರ್ಯಕರ್ತರು ಮತ್ತು ಸನ್ಯಾಸಿಗಳು ಬಹಿರಂಗ ಸಭೆಯಲ್ಲಿ ಪ್ರತಿಜ್ಞೆ ಮಾಡಿದ್ದಾರೆ.

ಉತ್ತರಾಖಂಡದ ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ನಾಲ್ಕು ದಿನಗಳ 'ಧರ್ಮ ಸಂಸದ್‌'ನಲ್ಲಿ ಮಾಡಿದ ಜನಾಂಗೀಯ ದ್ವೇಷ ಭಾಷಣಗಳು ಇದೀಗ ಅಂತರರಾಷ್ಟ್ರೀಯ ಮಟ್ಟದ ಗಮನ ಸೆಳೆದಿವೆ.

'20 ಲಕ್ಷ ಮಂದಿಯನ್ನು(ಮುಸ್ಲಿಮರನ್ನು) ಕೊಲ್ಲಲು ನಾವು ನೂರು ಮಂದಿ ಸಿದ್ಧರಿದ್ದರೆ, ಜಯಿಸಲು ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಸಾಧ್ಯ' ಎಂದು ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್‌ ಪಾಂಡೆ ವೇದಿಕೆಯಲ್ಲಿ ಹೇಳಿದ್ದಾರೆ. 'ಕೊಲ್ಲಲು ಮತ್ತು ಜೈಲು ಸೇರಲು ಸಿದ್ಧರಾಗಿರಿ' ಎಂದು ಕಾರ್ಯಕರ್ತರನ್ನು ಅಪರಾಧ ಕೃತ್ಯಗಳಿಗೆ ಪ್ರಚೋದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷಕ್ಕೆ ಆತ್ಮೀಯರಾಗಿರುವ ಪ್ರಭಾವಶಾಲಿ ಧಾರ್ಮಿಕ ಮುಖಂಡರು ಮತ್ತು ಪಕ್ಷದಕೆಲವು ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರಚೋದನಾಕಾರಿ ಭಾಷಣಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದರೂ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿದ್ದಾರೆ. ಇದು ತಮ್ಮ ಕಟ್ಟಾ ಬೆಂಬಲಿಗರ ರಕ್ಷಣೆಗೆ ಮೋದಿ ಅವರ ಮೌನ ಸಮ್ಮತಿ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತೀಯ ದ್ವೇಷ ಭಾಷಣಕ್ಕೆ ಸಂಬಂಧಿಸಿ ಪೊಲೀಸರು ನಿಧಾನಗತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರತಿಪಕ್ಷಗಳು ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡದಿರುವುದು, 2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಬಲಪಂಥೀಯ ಹಿಂದೂ ರಾಷ್ಟ್ರೀಯವಾದಿಗಳ ಬಿಗಿಹಿಡಿತದಲ್ಲಿ ದೇಶವಿದೆ ಎಂಬ ಸೂಚನೆಯನ್ನು ನೀಡಿದೆ.

ಉತ್ತರ ಪ್ರದೇಶ, ಉತ್ತರಾಖಂಡ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಥವಾ ಬಿಜೆಪಿ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಜ್ಯಗಳಲ್ಲಿ ಇಂತಹ ಉದ್ರೇಕಕಾರಿ ಭಾಷಣಗಳು ಕೇಳಿ ಬರುತ್ತಿವೆ.

ಪ್ರಚೋದನಾಕಾರಿ ಭಾಷಣದ ಬಗ್ಗೆ ಸಭೆ ಮುಗಿದು 4 ದಿನಗಳ ನಂತರ ಶುಕ್ರವಾರ ಉತ್ತರಾಖಂಡ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಎರಡು ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಹುಟ್ಟುಹಾಕಿದ ಆರೋಪದಲ್ಲಿ ಸಭೆಯ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

'ಕಾನೂನು ಪ್ರಕಾರ ತನಿಖೆಯನ್ನು ನಡೆಸುತ್ತೇವೆ. ಇಂತಹ ಘಟನೆಗಳನ್ನು ಸಹಿಸುವುದಿಲ್ಲ' ಎಂದು ಉತ್ತರಾಖಂಡದ ಉನ್ನತ ಪೊಲೀಸ್‌ ಅಧಿಕಾರಿ ಅಶೋಕ್‌ ಕುಮಾರ್‌ ಹೇಳಿದ್ದಾರೆ ಎಂದು 'ದಿ ನ್ಯೂಯಾರ್ಕ್‌ ಟೈಮ್ಸ್‌' ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT