ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕಾತಿ ಹಗರಣ| ಪಿತೂರಿಯೊಂದರ ಬಲಿಪಶು ನಾನು: ಪಾರ್ಥ ಚಟರ್ಜಿ

Last Updated 29 ಜುಲೈ 2022, 11:26 IST
ಅಕ್ಷರ ಗಾತ್ರ

ಕೋಲ್ಕತ್ತ: ‘ನನ್ನ ವಿರುದ್ಧ ಪಿತೂರಿಯೊಂದು ನಡೆಯುತ್ತಿದ್ದು, ನನ್ನನ್ನು ಬಲಿಪಶು ಮಾಡಲಾಗಿದೆ’ ಎಂದು ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೆ ಒಳಗಾಗಿರುವ ಪಾರ್ಥ ಚಟರ್ಜಿ ಶುಕ್ರವಾರ ಹೇಳಿದ್ದಾರೆ.

ಈ ಹಗರಣದಲ್ಲಿ ಬಂಧನಕ್ಕೆ ಒಳಗಾದ ನಂತರ ಪಾರ್ಥ ಚಟರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಎಲ್ಲ ಹುದ್ದೆಗಳು ಹಾಗೂ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ. ಇಂಥ ಕ್ರಮದ ಬೆನ್ನಲ್ಲೇ, ಪಾರ್ಥ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ನಗರದ ಹೊರವಲಯದ ಜೋಕಾ ಎಂಬಲ್ಲಿನ ಇಎಸ್ಐ ಆಸ್ಪತ್ರೆಯಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯಲಾಗಿತ್ತು. ಈ ವೇಳೆ ಸುದ್ದಿಗಾರರ ಪ್ರಶ್ನೆಗೆ, ‘ನಾನು ಪಿತೂರಿಯೊಂದರ ಬಲಿಪಶು ಆಗಿದ್ದೇನೆ’ ಎಂದರು.

ದಾಳಿ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ, ಅರ್ಪಿತಾ ಮುಖರ್ಜಿಗೆ ಸೇರಿದ ಮೂರನೇ ಫ್ಲ್ಯಾಟ್‌ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

‘ನಗರದ ಚಿನಾರ್‌ ಪಾರ್ಕ್‌ನಲ್ಲಿರುವ ಈ ಫ್ಲ್ಯಾಟ್‌ ಮೇಲೆ ಅಧಿಕಾರಿಗಳು ಗುರುವಾರ ಸಂಜೆ ದಾಳಿ ನಡೆಸಿದ್ದರು. ಫ್ಲ್ಯಾಟ್‌ನ ಬಾಗಿಲಿಗೆ ಬೀಗ ಹಾಕಲಾಗಿತ್ತು. ಬೀಗದ ಕೈ ಸಿಗದ ಕಾರಣ, ಕೇಂದ್ರೀಯ ಪಡೆಗಳ ಸಮ್ಮುಖದಲ್ಲಿ ಅಧಿಕಾರಿಗಳು ಬೀಗವನ್ನು ಮುರಿದು ಒಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT