ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುದುಚೇರಿ: ರಾಜೀವ್ ಗಾಂಧಿ ಹಂತಕರನ್ನು ಕ್ಷಮಿಸಿದ್ದೇನೆ ಎಂದ ರಾಹುಲ್ ಗಾಂಧಿ

Last Updated 17 ಫೆಬ್ರುವರಿ 2021, 14:04 IST
ಅಕ್ಷರ ಗಾತ್ರ

ಪುದುಚೇರಿ: ‘ತಂದೆ ರಾಜೀವ್ ಗಾಂಧಿ ಅವರನ್ನು 1991ರಲ್ಲಿ ಹತ್ಯೆ ಮಾಡಿದ್ದಾಗ ಅತೀವ ನೋವಾಗಿತ್ತು. ಆದರೆ, ಅದಕ್ಕೆ ಕಾರಣರಾದವರ ವಿರುದ್ಧ ಕೋಪ ಅಥವಾ ದ್ವೇಷವಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಪುದುಚೇರಿಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜತೆ ಅವರು ಸಂವಾದ ನಡೆಸಿದ್ದಾರೆ. ಈ ವೇಳೆ, ವಿದ್ಯಾರ್ಥಿನಿಯೊಬ್ಬರು, ‘ನಿಮ್ಮ ತಂದೆಯವರನ್ನು ಎಲ್‌ಟಿಟಿಇಉಗ್ರರು ಹತ್ಯೆ ಮಾಡಿದ್ದರು. ಅವರ ಬಗ್ಗೆ ನಿಮ್ಮ ಭಾವನೆ ಏನು’ ಎಂದು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ರಾಹುಲ್ ಗಾಂಧಿ, ಹಿಂಸಾಚಾರದಿಂದ ಏನನ್ನೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನನ್ನ ತಂದೆ ನನ್ನಲ್ಲಿ ಜೀವಂತವಾಗಿದ್ದಾರೆ’ ಎಂದಿದ್ದಾರೆ.

‘ನನಗೆ ಯಾರ ವಿರುದ್ಧವೂ ಕೋಪ ಅಥವಾ ದ್ವೇಷವಿಲ್ಲ. ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ ಮತ್ತು ನನಗೆ ಅದು ತುಂಬಾ ಕಷ್ಟದ ಸಮಯವಾಗಿತ್ತು. ವಿಪರೀತ ನೋವಾಗಿತ್ತು. ಅವರನ್ನು (ತಪ್ಪಿತಸ್ಥರನ್ನು) ಕ್ಷಮಿಸುತ್ತೇನೆ’ ಎಂದು ರಾಹುಲ್ ಹೇಳಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಅಪರಾಧಿಗಳನ್ನು ಬಿಡುಗಡೆ ಮಾಡಲು ಬಹುತೇಕ ಪಕ್ಷಗಳು ಬೆಂಬಲ ಸೂಚಿಸಿದ್ದರೂ, ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

ಚೆನ್ನೈ ಸಮೀಪದ ಶ್ರೀಪೆರಂಬೂದೂರ್‌ನಲ್ಲಿ 1991ರ ಮೇ 21ರಂದು ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರಾಜೀವ್‌ ಗಾಂಧಿಯವರನ್ನು ಮಹಿಳಾ ಆತ್ಮಾಹುತಿ ಬಾಂಬರ್‌ ಮೂಲಕ ಎಲ್‌ಟಿಟಿ ಉಗ್ರರು ಹತ್ಯೆ ಮಾಡಿದ್ದರು.

ವಿದ್ಯಾರ್ಥಿನಿಯರ ಜತೆ ಅವರು ಸಂವಾದಕ್ಕೂ ಮುನ್ನ ರಾಹುಲ್ ಪುದುಚೇರಿಯ ಮೀನುಗಾರ ಸಮುದಾಯದ ಜತೆ ಮಾತುಕತೆ ನಡೆಸಿದ್ದಾರೆ.

ಮೀನುಗಾರಿಕೆಗೆ ದೋಣಿ ಏರಲಿರುವ ರಾಹುಲ್‌!

ಮೀನುಗಾರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಮೀನುಗಾರರೊಂದಿಗೆ ದೋಣಿಯಲ್ಲಿಸಮುದ್ರಕ್ಕಿಳಿಯಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಜ್ಜಾಗಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣಾ ರ‍್ಯಾಲಿಗೆ ಚಾಲನೆ ನೀಡಲು ಪುದುಚೇರಿಗೆ ಆಗಮಿಸಿರುವ ರಾಹುಲ್‌ ಗಾಂಧಿ, ಮೀನುಗಾರರ ಸಮುದಾಯದೊಂದಿಗೆ ಸಂವಾದ ನಡೆಸಿದರು.

‘ಎಲ್ಲವೂ ಬರೀ ಮಾತುಗಳಿಂದಲೇ ಅರ್ಥವಾಗುವುದಿಲ್ಲ. ಕೆಲವನ್ನು ಅರ್ಥ ಮಾಡಿಕೊಳ್ಳಲು ಸ್ವಅನುಭವವೂ ಬೇಕಾಗುತ್ತದೆ. ಮುಂದಿನ ಬಾರಿ ಭೇಟಿ ನೀಡುವಾಗ,ಮೀನುಗಾರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಖುದ್ದು ಮೀನುಗಾರರೊಂದಿಗೆ ದೋಣಿಗಳಲ್ಲಿ ಸಮುದ್ರಯಾನ ನಡೆಸುವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT