ಮಂಗಳವಾರ, ಅಕ್ಟೋಬರ್ 19, 2021
23 °C

ಭಾರತೀಯ ವಾಯು ಪಡೆಗೆ 89ರ ಸಂಭ್ರಮ: 1971ರ ವಿಜಯದ ಸ್ಮರಣೆ, ವೈಮಾನಿಕ ಪ್ರದರ್ಶನ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ವಾಯು ಪಡೆ ಸ್ಥಾಪನೆಯಾದ 89ನೇ ವರ್ಷದ ಆಚರಣೆ ಇಂದು ನಡೆಯುತ್ತಿದೆ. ಎಂದಿನಂತೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್‌ ವಾಯುನೆಲೆಯಲ್ಲಿ ಕಾರ್ಯಾಕ್ರಮ ನಡೆಯುತ್ತಿದೆ. ವಾಯು ಪಡೆಯ ಮುಖ್ಯಸ್ಥರಾದ ವಿ.ಆರ್‌.ಚೌಧರಿ ಹಾಗೂ ಮೂರೂ ಶಸ್ತ್ರಾಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಯುನೈಟೆಡ್‌ ಕಿಂಗ್‌ಡಮ್‌ನ (ಇಂಗ್ಲೆಂಡ್‌) ರಾಯಲ್‌ ಏರ್‌ ಫೋರ್ಸ್‌ಗೆ ಬೆಂಬಲವಾಗಿ 1932ರ ಅಕ್ಟೋಬರ್‌ 8ರಂದು ಭಾರತೀಯ ವಾಯು ಪಡೆ ಸ್ಥಾಪನೆಯಾಯಿತು. ಆರಂಭದಲ್ಲಿ ದೇಶದ ವಾಯು ಪಡೆಯನ್ನು 'ರಾಯಲ್‌ ಇಂಡಿಯನ್‌ ಏರ್‌ ಫೋರ್ಸ್‌' ಎಂದೇ ಕರೆಯಲಾಗುತ್ತಿತ್ತು. ಭಾರತ ಗಣ್ಯರಾಜ್ಯವಾದ ನಂತರ 1950ರಲ್ಲಿ 'ರಾಯಲ್‌' ಪದವನ್ನು ತೆಗೆದು ಹಾಕಲಾಯಿತು. ಭಾರತದ ವಾಯು ಪಡೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ವಾಯು ಪಡೆಯಾಗಿದೆ. ಏರ್‌ ಚೀಫ್‌ ಮಾರ್ಷಲ್‌ (ಎಸಿಎಂ) ವಾಯು ಪಡೆಯ ಮುಖ್ಯಸ್ಥರಾಗಿರುತ್ತಾರೆ ಹಾಗೂ ಭಾರತದ ರಾಷ್ಟ್ರಪತಿ ಶಸ್ತ್ರಾಸ್ತ್ರ ಪಡೆಗಳ ಕಮಾಂಡರ್‌–ಇನ್‌–ಚೀಫ್‌ ಆಗಿರುತ್ತಾರೆ.

1971ರ ಯುದ್ಧದ ವೀರ ಯೋಧರಿಗೆ ಇವತ್ತಿನ ವಾಯು ಪಡೆ ದಿನದ ಪರೇಡ್‌ನಲ್ಲಿ ಗೌರವ ಸಲ್ಲಿಸಲಾಗುತ್ತಿದೆ. 1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತವು ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾಯಿತು. ಆ ಯುದ್ಧದ ಸನ್ನಿವೇಶವನ್ನೇ ಬದಲಿಸಿದ್ದು ವಾಯು ಪಡೆಯ 'ತಂಗೈಲ್‌ ಏರ್‌ಡ್ರಾಪ್‌' ಕಾರ್ಯಾಚರಣೆ. 50 ವರ್ಷಗಳ ಬಳಿಕ ಆ ಕಾರ್ಯಾಚರಣೆಯ ನೆನಪಿಗಾಗಿ ಹಳೆಯ 'ಡಕೋಟಾ ವಿಮಾನದ' ಮೂಲಕ ಮೂವರು ಪ್ಯಾರಾಟ್ರೂಪರ್‌ಗಳು ಜಿಗಿಯಲಿದ್ದಾರೆ. ವಾಯು ಪಡೆಯಿಂದ ಇಬ್ಬರು ಮತ್ತು ಸೇನೆಯಿಂದ ಒಬ್ಬ ಪ್ಯಾರಾಟ್ರೂಪರ್‌ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ.

ಲೋಂಗೆವಾಲಾ ಯುದ್ಧದ ವಿಜಯವನ್ನು ನೆನಪಿಸಲು 'ವಿನಾಶ್‌ ರಚನೆ' ಪ್ರದರ್ಶನ ನಡೆಯಲಿದೆ. ಆರು ಹಂಟರ್‌ ವಿಮಾನಗಳು ಈ ರಚನೆಯಲ್ಲಿ ಹಾರಾಟ ನಡೆಸಲಿವೆ.

ಇದೇ ಸಮಯದಲ್ಲಿ ಪರಮ ವೀರ ಚಕ್ರ ಪುರಸ್ಕೃತ ನಿರ್ಮಲ್‌ಜಿತ್‌ ಸಿಂಗ್‌ ಸೆಖೋ ಅವರ ಗೌರವಾರ್ಥ 'ಸೆಖೋ ರಚನೆ' ಪ್ರದರ್ಶನ ನಡೆಯಲಿದೆ. ವಾಯು ಪಡೆಯಲ್ಲಿ ಪರಮ ವೀರ ಚಕ್ರ ಪುರಸ್ಕೃತರಾಗಿರುವ ಏಕೈಕ ವ್ಯಕ್ತಿ ನಿರ್ಮಲ್‌ಜಿಲ್‌ ಸಿಂಗ್‌. ಸೆಖೋ ರಚನೆಯಲ್ಲಿ ರಫೇಲ್‌, ತೇಜಸ್‌, ಜಾಗ್ವಾರ್‌, ಮಿಗ್‌–29 ಹಾಗೂ ಮಿರೇಜ್‌ 2000 ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ.

ಎಂಐ–17 ಮತ್ತು ಚಿನೂಕ್‌ ಹೆಲಿಕಾಪ್ಟರ್‌ಗಳು 'ಮೇಘನಾ ರಚನೆಯ' ಪ್ರದರ್ಶನ ನೀಡಲಿವೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಾಯು ಪಡೆಯ ದಿನದ ಪ್ರಯುಕ್ತ ಶುಭ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು