ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನ ಪುನರ್ ಸ್ಥಾಪಿಸಿ: ರಾಹುಲ್ ಗಾಂಧಿ ಒತ್ತಾಯ

ಶ್ರೀನಗರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ
Last Updated 10 ಆಗಸ್ಟ್ 2021, 15:58 IST
ಅಕ್ಷರ ಗಾತ್ರ

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನ ಪುನರ್ ಸ್ಥಾಪಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮಂಗಳವಾರ ಒತ್ತಾಯಿಸಿದ್ದಾರೆ.

ಶ್ರೀನಗರದಲ್ಲಿ ನೂತನ ಕಾಂಗ್ರೆಸ್ ಭವನ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ವಿಧಾನಸಭಾ ಚುನಾವಣೆ ನಡೆಯಬೇಕು. ರಾಜ್ಯದ ಸ್ಥಾನಮಾನ ಪುನರ್‌ ಸ್ಥಾಪನೆ ಮಾಡಬೇಕು ಎನ್ನುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಭಾರತವನ್ನು ವಿಭಜಿಸುವ ನೀತಿಯ ವಿರುದ್ಧ ಹೋರಾಟ ಮಾಡಬೇಕಿದೆ. ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಮತ್ತು ದೇಶದ ಇತರ ಭಾಗಗಳಲ್ಲೂ ವಿಭಜನೆಯ ನೀತಿ ತರುತ್ತಿದ್ದಾರೆ. ಜಮ್ಮು–ಕಾಶ್ಮೀರವು ದೆಹಲಿಯಿಂದ ನೇರವಾಗಿ ದಾಳಿಗೆ ಒಳಗಾಗಿದ್ದರೆ, ಇತರ ಭಾಗಗಳು ಪರೋಕ್ಷ ದಾಳಿಯನ್ನು ಎದುರಿಸುತ್ತಿವೆ’ ಎಂದು ಅವರು ಆರೋಪಿಸಿದರು.

ಕೇಂದ್ರಾಡಳಿತ ಪ್ರದೇಶದ ಜನರ ನೋವು ನನಗೆ ಅರ್ಥವಾಗುತ್ತದೆ. ಪ್ರೀತಿ ಮತ್ತು ಗೌರವದ ಮೂಲಕ ಸಂಬಂಧವನ್ನು ಕಟ್ಟಿಕೊಡಲು ನಾನು ನಿಮ್ಮೊಂದಿಗೆ ಇರುತ್ತೇನೆ’ ಎಂದ ಅವರು, ‘ಭಾರತವನ್ನು ಒಡೆಯುವ ಜತೆಗೆ ಹಿಂಸೆಯನ್ನು ಬೋಧಿಸುವ ಮೋದಿ ಅವರ ಸಿದ್ಧಾಂತದ ವಿರುದ್ಧ ನಾನು ಹೋರಾಡುತ್ತೇನೆ. ರಫೇಲ್, ನಿರುದ್ಯೋಗ, ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿಯವರು ನ್ಯಾಯಾಂಗ ವ್ಯವಸ್ಥೆ, ಲೋಕಸಭೆ ಅಷ್ಟೇ ಏಕೆ ಮಾಧ್ಯಮಗಳ ಧ್ವನಿಯನ್ನೂ ಅಡಗಿಸಿದ್ದಾರೆ’ ಎಂದು ರಾಹುಲ್ ಟೀಕಿಸಿದರು.

ಇದಕ್ಕೂ ಮುನ್ನ ರಾಹುಲ್ ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಹಜರತ್‌ಬಾಲ್ ದೇಗುಲ, ಖೀರ್ ಭವಾನಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮುನ್ನ 2019ರಲ್ಲಿ ಭೇಟಿ ನೀಡಲು ಯತ್ನಿಸಿದ್ದಾಗ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT