ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸಾರ್ವಭೌಮತೆ ವಿಷಯದಲ್ಲಿ ರಾಜಿ ಇಲ್ಲ: ಚೀನಾ-ಪಾಕ್‌ಗೆ ಮೋದಿ ಪರೋಕ್ಷ ಎಚ್ಚರಿಕೆ

ಕೆಂಪುಕೋಟೆ ಮೇಲೆ ಏಳನೇ ಬಾರಿ ಧ್ವಜಾರೋಹಣ
Last Updated 15 ಆಗಸ್ಟ್ 2020, 20:56 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದ ಸಾರ್ವಭೌಮತೆಗೆ ಸವಾಲು ಒಡ್ಡಿದರೆ ಸುಮ್ಮನಿರಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೆರೆಯ ಚೀನಾ ಮತ್ತು ಪಾಕಿಸ್ತಾನಕ್ಕೆ ಶನಿವಾರ ಪರೋಕ್ಷ ಎಚ್ಚರಿಕೆ ನೀಡಿದರು.

74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಎಲ್ಲಾ ದೇಶಗಳ ಜತೆ ಭಾರತ ಉತ್ತಮ ಬಾಂಧವ್ಯ ಹೊಂದಿದೆ. ಆದರೆ, ತನ್ನ ಸಾರ್ವಭೌಮತೆಗೆ ಧಕ್ಕೆಯಾದರೆ ಮಾತ್ರ ಸಹಿಸಿಕೊಳ್ಳುವುದಿಲ್ಲ ಎಂಬ ಕಠಿಣ ಸಂದೇಶ ರವಾನಿಸಿದರು.

‘ಭಯೋತ್ಪಾದನೆ ಮತ್ತು ವಿಸ್ತರಣಾವಾದವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಾಗುವುದು’ ಎಂದರು.

‘ಗಡಿಗಳಲ್ಲಿ ತಂಟೆಕೋರರಿಗೆ ಅರ್ಥವಾಗುವ ಭಾಷೆಯಲ್ಲಿಯೇ ನಮ್ಮ ಯೋಧರು ತಿರುಗೇಟು ನೀಡಿದ್ದಾರೆ’ ಎಂದು ಹೇಳಿದರು.

ಕೆಂಪುಕೋಟೆಯ ಮೇಲಿಂದ ಏಳನೇ ಬಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, 96 ನಿಮಿಷಗಳ ಭಾಷಣದಲ್ಲಿ ಎಲ್ಲಿಯೂ ಪಾಕಿಸ್ತಾನ ಮತ್ತು ಚೀನಾ ಹೆಸರು ಪ್ರಸ್ತಾಪಿಸಲಿಲ್ಲ.

ಕೋವಿಡ್‌ ಅಡ್ಡಿಯಾಗದು:ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸಬೇಕು ಎಂಬ ನಮ್ಮ‘ಆತ್ಮನಿರ್ಭರ ಭಾರತ’ ಸಂಕಲ್ಪಕ್ಕೆ ಕೋವಿಡ್‌–19 ಪಿಡುಗು ತಡೆಯೊಡ್ಡಲಾರದು. ಸ್ವಾವಲಂಬಿ ಭಾರತದ ಸಂಕಲ್ಪವು ದೇಶದ ಅರ್ಥ ವ್ಯವಸ್ಥೆಗೆ ಹೊಸ ಚೈತನ್ಯ ತುಂಬಲಿದೆ ಎಂದು ಹೇಳಿದ ಅವರು, ಆತ್ಮನಿರ್ಭರ ಭಾರತದ ಕನಸನ್ನುಸಾಕಾರಗೊಳಿಸುವ ನೀಲನಕ್ಷೆಯನ್ನು ದೇಶದ ಜನರ ಮುಂದಿಟ್ಟರು.

‘ಈ ಗುರಿ ತಲುಪುವ ಹಾದಿ ಸುಲಭದ್ದಲ್ಲ. ಅದು ಸವಾಲುಗಳಿಂದ ಕೂಡಿದೆ ಎಂಬುದು ಗೊತ್ತು. ಈ ಸವಾಲುಗಳಿಗೆ ನಮ್ಮಲ್ಲಿಯೇ ಪರಿಹಾರ ಗಳೂ ಇವೆ. ಕೃಷಿ ಕ್ಷೇತ್ರದಲ್ಲಿ ನಾವು ಈಗಾಗಲೇ ಸ್ವಾವಲಂಬಿಗಳಾಗುತ್ತಿದ್ದೇವೆ. ಈ ಸಂಕಲ್ಪಕ್ಕೆ ಪೂರಕವಾಗಿ ಹೊಸ ಶಿಕ್ಷಣ ನೀತಿ ರೂಪಿಸಿದ್ದೇವೆ’ ಎಂದರು.

ವೋಕಲ್‌ ಫಾರ್‌ ಲೋಕಲ್‌
ಸ್ಥಳೀಯ ಕೈಗಾರಿಕೆ ಮತ್ತು ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಧಾನಿ, ಮತ್ತೊಮ್ಮೆ ‘ವೋಕಲ್ ಫಾರ್ ಲೋಕಲ್’ ಘೋಷಣೆ ಮೊಳಗಿಸಿದರು. ಕೊರೊನಾ ಸಂಕಷ್ಟ ಕಾಲದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಬೇಕು. ಸ್ಥಳೀಯ ಉತ್ಪಾದಕರು ಮತ್ತು ಗುಡಿ ಕೈಗಾರಿಕೋದ್ಯಮಿಗಳ ಸಂಕಷ್ಟಕ್ಕೆ ನಾವು ಧ್ವನಿಯಾಗಿರಬೇಕು ಎಂದು ಕರೆ ನೀಡಿದರು.

ಮುಂಬರುವ ವರ್ಷಗಳಲ್ಲಿ ಭಾರತವು ಆಮದು ಕಡಿಮೆಗೊಳಿಸಿ, ರಫ್ತು ವಹಿವಾಟಿಗೆ ಆದ್ಯತೆ ನೀಡಬೇಕಿದೆ. ಅದಕ್ಕಾಗಿ ‘ಮೇಕ್‌ ಇನ್‌ ಇಂಡಿಯಾ’ ಜತೆಜತೆಯಲ್ಲಿ ‘ಮೇಕ್‌ ಫಾರ್‌ ವರ್ಲ್ಡ್‌’ ನಮ್ಮ ಉದ್ಯಮಿಗಳ ಮಂತ್ರವಾಗಬೇಕಿದೆ ಎಂದು ಮೋದಿ ಕರೆ ನೀಡಿದರು.

ಪ್ರತಿ ನಾಗರಿಕರಿಗೂ ಹೆಲ್ತ್‌ ಕಾರ್ಡ್‌
ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶದಿಂದ ‘ನ್ಯಾಷನಲ್‌ ಡಿಜಿಟಲ್ ಹೆಲ್ತ್‌‌ ಮಿಷನ್‌’ ಎಂಬ ಹೊಸ ಆರೋಗ್ಯ ಸೇವೆ ಯೋಜನೆಯನ್ನು ಮೋದಿ ಘೋಷಿಸಿದರು.

ಈ ಯೋಜನೆ ಅಡಿ ಪ್ರತಿಯೊಬ್ಬರಿಗೂ ಹೆಲ್ತ್‌ ಕಾರ್ಡ್‌ ನೀಡಲಾಗುವುದು.ಇದು ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಮಾದರಿಯಲ್ಲಿಯೇ ಈ ಕಾರ್ಡ್‌ನಲ್ಲಿ ಹೆಲ್ತ್‌ ಐ.ಡಿ ಮತ್ತು ಸಂಖ್ಯೆ ಇರುತ್ತದೆ. ಡಿಜಿಟಲ್‌ ಹೆಲ್ತ್‌ ಕಾರ್ಡ್‌ ಭಾರತೀಯರ ‘ಹೆಲ್ತ್‌ ಅಕೌಂಟ್’ ‌ನಂತೆ ಕೆಲಸ ಮಾಡಲಿದೆ ಎಂದರು.

ಈ ಕಾರ್ಡ್‌ನಲ್ಲಿ ವ್ಯಕ್ತಿಗಳ ಆರೋಗ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಿ ಇಡಲಾಗುವುದು. ಖಾಯಿಲೆಯ ಸ್ವರೂಪ, ತಪಾಸಣೆ, ರಕ್ತಪರೀಕ್ಷೆ, ವೈದ್ಯಕೀಯ ವರದಿ, ಔಷಧಿ ಮತ್ತು ಚಿಕಿತ್ಸೆಯ ವಿವರಗಳು ಡಿಜಿಟಲ್‌ ರೂಪದಲ್ಲಿ ಇರಲಿವೆ. ದೇಶದ ಯಾವುದೇ ಮೂಲೆಯಲ್ಲಾದರೂ ಈ ಕಾರ್ಡ್‌ ಬಳಸಿ ಜನರು ಆರೋಗ್ಯ ಸೇವೆ ಪಡೆಯಬಹುದು ಎಂದು ಪ್ರಧಾನಿ ವಿವರಿಸಿದರು.

ಆದಷ್ಟು ಬೇಗ ದೇಸಿ ಲಸಿಕೆ
ಕೋವಿಡ್‌–19 ವಿರುದ್ಧದ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತ ಯಶಸ್ಸು ಸಾಧಿಸಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ದೇಸಿಯವಾಗಿ ಮೂರು ಲಸಿಕೆಗಳನ್ನು ಭಾರತಈಗಾಗಲೇ ಅಭಿವೃದ್ಧಿಪಡಿಸಿದ್ದು, ಆದಷ್ಟು ಬೇಗ ಜನರಿಗೆ ಲಭ್ಯವಾಗಲಿವೆ ಎಂದು ಪ್ರಧಾನಿ ತಿಳಿಸಿದರು.ಮೂರು ಲಸಿಕೆಗಳು ಟ್ರಯಲ್ಸ್‌ ಹಂತದಲ್ಲಿವೆ. ವಿಜ್ಞಾನಿಗಳು ಒಪ್ಪಿಗೆ ನೀಡಿದ ಕೂಡಲೇ ‌ಸಾಮೂಹಿಕವಾಗಿ ಲಸಿಕೆ ತಯಾರಿಕೆ ಕಾರ್ಯ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT