ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದೊಂದಿಗೆ ಒಡಂಬಡಿಕೆ ಸಂಕೀರ್ಣವಾದದ್ದು: ಭಾರತ

Last Updated 13 ಮಾರ್ಚ್ 2023, 13:56 IST
ಅಕ್ಷರ ಗಾತ್ರ

ನವದೆಹಲಿ: ‘ಚೀನಾದೊಂದಿಗಿನ ಭಾರತದ ಒಡಂಬಡಿಕೆಯು ಸಂಕೀರ್ಣವಾದದ್ದು. 2020ರ ಏಪ್ರಿಲ್–ಮೇ ತಿಂಗಳಿನಿಂದ ಪೂರ್ವ ಲಡಾಖ್‌ನಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾ ನಡೆಸಿದ ಪ್ರಯತ್ನಗಳು ಗಡಿಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಗಂಭೀರವಾಗಿ ಕದಡಿದವು’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ 2022ರ ವಾರ್ಷಿಕ ವರದಿಯಲ್ಲಿ ಸೋಮವಾರ ತಿಳಿಸಿದೆ.

‘ಚೀನಾದ ಈ ಪ್ರಯತ್ನಗಳಿಗೆ ಭಾರತದ ಸಶಸ್ತ್ರಪಡೆಗಳು ಸೂಕ್ತವಾಗಿ ಪ್ರತಿಕ್ರಿಯಿಸಿ ಎದುರಿಸಿವೆ’ ಎಂದೂ ವರದಿಯಲ್ಲಿ ಹೇಳಲಾಗಿದೆ.

‘ಗಡಿ ಪ್ರಶ್ನೆಯ ಅಂತಿಮ ಇತ್ಯರ್ಥವು ಬಾಕಿ ಉಳಿದಿದ್ದು, ‌ಎರಡೂ ದೇಶಗಳ ಒಟ್ಟಾರೆ ಅಭಿವೃದ್ಧಿಗಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಬೇಕೆಂಬುದು ದ್ವಿಪಕ್ಷೀಯ ಒಪ್ಪಂದದ ಉದ್ದೇಶವಾಗಿದೆ. ಪೂರ್ವ ಲಡಾಖ್‌ನಲ್ಲಿನ ಎಲ್‌ಎಸಿಯಲ್ಲಿನ ಸಮಸ್ಯೆಗಳನ್ನು ಶಾಂತಿಯುತ ಮಾತುಕತೆಯ ಮೂಲಕ ಪರಿಹರಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಭಾರತ ಮತ್ತು ಚೀನಾದ ಗಡಿಯಲ್ಲಿ ಎಲ್ಲಾ ಘರ್ಷಣೆಯ ಬಿಂದುಗಳಿಂದ ಸಂಪೂರ್ಣ ನಿರ್ಗಮನ ಮತ್ತು ಶಾಂತಿ ಹಾಗೂ ನೆಮ್ಮದಿಯ ಸಂಪೂರ್ಣ ಮರುಸ್ಥಾಪನೆಯನ್ನು ಸಾಧಿಸಲು ಚೀನಾದ ಕಡೆಯಿಂದ ಚರ್ಚೆಗಳು ಮುಂದುವರೆದಿದೆ. ಆದಾಗ್ಯೂ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾ ನಡೆಸಿದ ಪ್ರಯತ್ನಗಳು ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಿದೆ’ ಎಂದು ಎಂಇಎ ಹೇಳಿದೆ.

‘ಎಲ್‌ಎಸಿಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಎರಡೂ ಕಡೆಗಳಲ್ಲಿ ಪ್ರಗತಿ ಸಾಧಿಸಲಾಗಿದೆ. 2021ರ ಫೆಬ್ರುವರಿಯಲ್ಲಿ ಪ್ಯಾಂಗೊಂಗ್ ತ್ಸೊದಲ್ಲಿ ಮತ್ತು 2021ರ ಆಗಸ್ಟ್‌ನಲ್ಲಿ ಗೋಗ್ರಾ ಪ್ರದೇಶದಲ್ಲಿ ಹಾಗೂ 2022ರ ಸೆಪ್ಟೆಂಬರ್‌ನಲ್ಲಿ ಗೋಗ್ರಾದಿಂದ (ಪಿಪಿ–15) ಸೇನಾಪಡೆಗಳನ್ನು ಹಿಂಪಡೆಯಲಾಯಿತು’ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಗಡಿ ಸಮಸ್ಯೆಯನ್ನು ಪರಿಹರಿಸಲು ಭಾರತ ಮತ್ತು ಚೀನಾ ನಡುವೆ ನಡೆದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನೂ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

‘ಕಳೆದ ವರ್ಷ ಮಾರ್ಚ್ 25ರಂದು ಭಾರತಕ್ಕೆ ಭೇಟಿ ನೀಡಿದ್ದ ಚೀನಾದ ಅಂದಿನ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸಭೆ ನಡೆಸಿದ್ದರು. ಸಭೆಯಲ್ಲಿ ಉಭಯ ದೇಶಗಳು ಗಡಿಪರಿಸ್ಥಿತಿಯ ಕುರಿತು ಅಭಿಪ್ರಾಯ ವಿನಿಮಯಮಾಡಿಕೊಂಡವು’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT