ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇನಾಮಿ ಆಸ್ತಿ ಪ್ರಕರಣ: ವಾದ್ರಾ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಿದ ಐ.ಟಿ

Last Updated 4 ಜನವರಿ 2021, 13:43 IST
ಅಕ್ಷರ ಗಾತ್ರ

ನವದೆಹಲಿ: ಬ್ರಿಟನ್‌ನಲ್ಲಿ ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್‌ ವಾದ್ರಾ ಅವರ ಮನೆಗೆ ಭೇಟಿ ನೀಡಿದ ಆದಾಯ ತೆರಿಗೆ(ಐ.ಟಿ) ಇಲಾಖೆ ಅಧಿಕಾರಿಗಳು, ಅವರಿಂದ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಲಾಖೆಯ ಕಚೇರಿಗೆ ಆಗಮಿಸಿ ತನಿಖೆಗೆ ಸಹಕರಿಸುವಂತೆ ವಾದ್ರಾ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ಕೋವಿಡ್‌–19 ನಿರ್ಬಂಧಗಳನ್ನು ಉಲ್ಲೇಖಿಸಿದ್ದರು. ಹೀಗಾಗಿ ಅಧಿಕಾರಿಗಳ ತಂಡವೇ ದೆಹಲಿಯ ಸುಖ್‌ದೇವ್‌ ವಿಹಾರ್‌ ಪ್ರದೇಶದಲ್ಲಿರುವ ಅವರ ಮನೆಗೆ ಭೇಟಿ ನೀಡಿದೆ. ಬೇನಾಮಿ ಆಸ್ತಿ ವ್ಯವಹಾರ ತಡೆ ಕಾಯ್ದೆಯಡಿ ಅವರ ಹೇಳಿಕೆಗಳನ್ನು ಈ ಇಲಾಖಾ ತಂಡ ದಾಖಲಿಸಿದೆ.

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಪತಿ ಆಗಿರುವ ವಾದ್ರಾ, ಬ್ರಿಟನ್‌ನಲ್ಲಿ ಬಹಿರಂಗಪಡಿಸದ ಆಸ್ತಿಗಳನ್ನು ಹೊಂದಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಜಾರಿ ನಿರ್ದೇಶನಾಲಯವೂ(ಇ.ಡಿ) ವಾದ್ರಾ ವಿರುದ್ಧ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುತ್ತಿದೆ.

‘ತಾನು ಯಾವುದೇ ಅಕ್ರಮವೆಸಗಿಲ್ಲ’ ಎಂದು ವಾದ್ರಾ ತನ್ನ ಮೇಲಿನ ಆರೋಪಗಳನ್ನು ತಿರಸ್ಕರಿಸಿದ್ದಾರೆ. ‘ಇದು ರಾಜಕೀಯ ದ್ವೇಷ’ ಎಂದು ಕಾಂಗ್ರೆಸ್‌ ಪಕ್ಷವೂ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT