ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ಆತ್ಮಾಹುತಿ ದಾಳಿಕೋರನಿಗೆ ತರಬೇತಿ ನೀಡಿದ್ದ ಉಗ್ರ ಎನ್‌ಕೌಂಟರ್‌ಗೆ ಬಲಿ 

Last Updated 31 ಜುಲೈ 2021, 11:04 IST
ಅಕ್ಷರ ಗಾತ್ರ

ಪುಲ್ವಾಮಾ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಶನಿವಾರ ನಡೆದ ಎನ್ಕೌಂಟರ್‌ನಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಸೋದರಳಿಯ ಮೊಹಮ್ಮದ್ ಇಸ್ಮಾಯಿಲ್ ಅಲಿಯಾಸ್ ಲಂಬೂ ಸೇರಿದಂತೆ ಇಬ್ಬರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಉಗ್ರರು ಇರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶನಿವಾರ ಬೆಳಗ್ಗೆ ನಮೀಬಿಯಾನ್, ಮಾರ್ಸರ್ ಅರಣ್ಯ ಪ್ರದೇಶ ಮತ್ತು ದಾಚಿಗಾಂನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಶೋಧ ಕಾರ್ಯಾಚರಣೆ ವೇಳೆ ಉಗ್ರರು ಗುಂಡಿನ ದಾಳಿ ಮಾಡಿದರು. ಹೀಗಾಗಿ ಕಾರ್ಯಾಚರಣೆಯು ಎನ್‌ಕೌಂಟರ್‌ನಲ್ಲಿ ಮುಕ್ತಾಯವಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ಇಬ್ಬರು ಉಗ್ರರ ಪೈಕಿ ಒಬ್ಬನನ್ನು ಮೊಹಮ್ಮದ್ ಇಸ್ಮಾಯಿಲ್ ಅಲ್ವಿ ಅಲಿಯಾಸ್ ಅದ್ನಾನ್‌ ಅಲಿಯಾಸ್ ಲಂಬೂ ಎಂದು ಗುರುತಿಸಲಾಗಿದೆ. ಆತ ಐಇಡಿ ಸ್ಫೋಟಕಗಳ ವಿಚಾರದಲ್ಲಿ ಪರಿಣಿತನಾಗಿದ್ದ. 2019 ರಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿಯ ಜೀವ ಬಲಿ ಪಡೆದಿದ್ದ ಪುಲ್ವಾಮಾ ದಾಳಿಯ ಹಿಂದೆ ಈತನದ್ದೂ ಕೈವಾಡ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಲಂಬೂ ಮಸೂದ್ ಜೆಇಎಂನ ಮುಖ್ಯಸ್ಥ ಅಜರ್ ಕುಟುಂಬದವನಾಗಿದ್ದಾನೆ. ಪುಲ್ವಾಮಾ ದಾಳಿಯ ಸಂಚು ಮತ್ತು ಯೋಜನೆಯಲ್ಲಿ ಈತ ಭಾಗಿಯಾಗಿದ್ದ. ಪುಲ್ವಾಮ ದಾಳಿಗೆ ಸಂಬಂಧಿಸಿದ ಎನ್ಐಎ ಚಾರ್ಜ್‌ಶೀಟ್‌ನಲ್ಲಿ ಆತನ ಹೆಸರಿತ್ತು’ ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

‘ಪುಲ್ವಾಮ ದಾಳಿಯಲ್ಲಿ ಐಇಡಿ ಮೂಲಕ ಸ್ವತಃ ತನ್ನನ್ನೇ ಸ್ಫೋಟಿಸಿಕೊಂಡ ಆದಿಲ್ ಧರ್‌ಗೆ ತರಬೇತಿ ನೀಡಿದವರಲ್ಲಿ ಲಂಬೂ ಕೂಡ ಒಬ್ಬನಾಗಿದ್ದ. ಐಇಡಿಗಳನ್ನು ತಯಾರಿಸುವುದು ಮತ್ತು ಭದ್ರತಾ ಪಡೆಗಳ ವಿರುದ್ಧ ಐಇಡಿಗಳನ್ನು ಪ್ರಯೋಗಿಸಲು ಜನರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಲಂಬೂನಿಗೆ ವಹಿಸಲಾಗಿತ್ತು. ಸ್ಥಳೀಯ ಯುವಕರ ತಲೆ ಕೆಡಿಸಿ, ಸಂಘಟನೆಗೆ ನೇಮಿಸಿಕೊಳ್ಳುವ ಜವಾಬ್ದಾರಿಯನ್ನೂ ಲಂಬೂ ಹೊಂದಿದ್ದ,’ ಎಂದು ‘ಚಿನಾರ್ ಕಾರ್ಪ್ಸ್’ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಹೇಳಿದ್ದಾರೆ. ಈ ಕುರಿತು ಎಎನ್‌ಐ ವರದಿ ಮಾಡಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಬೆಂಗಾವಲು ವಾಹನದ ಸಮೀಪ ಆದಿಲ್‌ ಧರ್‌ ಎಂಬಾತ ಆತ್ಮಾಹುತಿ ಬಾಂಬ್‌ ಸ್ಫೋಟಿಸಿದ್ದ. ಈ ಘಟನೆಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು ಮತ್ತು ಹಲವಾರು ಗಾಯಗೊಂಡಿದ್ದರು.

ಸೇನೆ ಮತ್ತು ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನು ಕಾಶ್ಮೀರ ಐಜಿಪಿ ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT