ಭಾನುವಾರ, ಏಪ್ರಿಲ್ 2, 2023
33 °C
ಪೊಲೀಸ್‌ ಬಸ್‌ ಮೇಲೆ ಉಗ್ರರ ದಾಳಿ; ಶ್ರೀನಗರದ ಝೆವಾನ್‌ ಪ್ರದೇಶದ ಬಳಿ ಘಟನೆ

ಕಾಶ್ಮೀರ: ಉಗ್ರರ ದಾಳಿಯಲ್ಲಿ ಎಎಸ್‌ಐ ಸೇರಿ ಇಬ್ಬರು ಸಾವು- 12 ಮಂದಿಗೆ ಗಾಯ

ಸಿದ್ದರಾಜು ಎಂ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಇಲ್ಲಿನ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯ ಝೆವಾನ್‌ ಪ್ರದೇಶದ ಬಳಿ ಸೋಮವಾರ ಉಗ್ರರು ಪೊಲೀಸ್‌ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಎಎಸ್‌ಐ ಸೇರಿ ಇಬ್ಬರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ಎಎಸ್‌ಐ ಗುಲಾಂ ಹಸನ್‌ ಭಟ್‌ ಹಾಗೂ ಹೆಡ್‌ಕಾನ್‌ಸ್ಟೆಬಲ್‌ ಶಫೀಕ್‌ ಅಲಿ ಹುತಾತ್ಮರಾದವರು. ಘಟನೆಯಲ್ಲಿ ಗಾಯಗೊಂಡ ಎಲ್ಲರನ್ನೂ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು

‘ಪಂತ್‌ ಚೌಕದ ಬಳಿ ತೆರಳುತ್ತಿದ್ದ ಭಾರತೀಯ ಮೀಸಲು ಪೊಲೀಸ್‌ (ಐಆರ್‌ಪಿ) 9ನೇ ತುಕಡಿಯ ಬಸ್ಸಿನ ಮೇಲೆ ಎರಡ್ಮೂರು ಜನರಿದ್ದ ಉಗ್ರರ ಗುಂಪು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 12 ಪೊಲೀಸರು ಗಾಯಗೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಉಗ್ರರ ವಿರುದ್ಧ ಭಾರಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಝೆವಾನ್‌ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ. ದಾಳಿ ನಡೆದ ಸ್ಥಳದ ಸಮೀಪದಲ್ಲೇ ಡಿಐಜಿಪಿ ರ‍್ಯಾಂಕ್‌ನ ಪೊಲೀಸ್‌ ಅಧಿಕಾರಿ, ಭಾರತೀಯ ಸೇನೆಯ ಮೂವರು ಕಮಾಂಡಿಂಗ್‌ ಅಧಿಕಾರಿಗಳ ಕಚೇರಿ ಸೇರಿದಂತೆ ಸೇನೆ, ಸಿಆರ್‌ಪಿಎಫ್‌ ಹಾಗೂ ಬಿಎಸ್ಎಫ್‌ನ ಹಲವು ಶಿಬಿರಗಳಿದ್ದು, ಅತ್ಯಂತ ಸುರಕ್ಷಿತ ಪ್ರದೇಶದಲ್ಲೇ ಇಂತಹ ದಾಳಿ ನಡೆದಿರುವುದು ಪೊಲೀಸರನ್ನು ಕಂಗೆಡಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ನಡೆದ ದಾಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿವರ ಕೇಳಿದ್ದು, ದಾಳಿಯಲ್ಲಿ ಹುತಾತ್ಮರಾದ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಹಾಗೂ ಒಮರ್‌ ಅಬ್ದುಲ್ಲಾ ಅವರು ಹುತಾತ್ಮ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು