ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್ ರೋಪ್‌ವೇ ದುರಂತ: ಒಬ್ಬರು ಸಾವು, ಕೇಬಲ್ ಕಾರುಗಳಲ್ಲಿ ಸಿಲುಕಿದ 48 ಮಂದಿ

Last Updated 11 ಏಪ್ರಿಲ್ 2022, 7:52 IST
ಅಕ್ಷರ ಗಾತ್ರ

ದೇವಘರ್: ಜಾರ್ಖಂಡ್‌ನ ದೇವಘರ್ ಜಿಲ್ಲೆಯ ಬಾಬಾ ವೈದ್ಯನಾಥ ದೇಗುಲ ಬಳಿಯ ತ್ರಿಕೂಟ ಪರ್ವತ ಪ್ರದೇಶದಲ್ಲಿ 12 ರೋಪ್‌ವೇ ಕೇಬಲ್ ಕಾರುಗಳು ಡಿಕ್ಕಿಯಾದ ಪರಿಣಾಮ ಒಬ್ಬರು ಮೃತಪಟ್ಟಿದ್ದಾರೆ. 48 ಮಂದಿ ಕೇಬಲ್ ಕಾರುಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಸಂಜೆ 4.30ರ ವೇಳೆಗೆ ಕೇಬಲ್ ಕಾರುಗಳ ಡಿಕ್ಕಿ ಸಂಭವಿಸಿದೆ. 10 ಮಂದಿ ಪ್ರವಾಸಿಗರು ಗಂಭೀರ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರು ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪ್ರವಾಸಿಗರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ತಂಡವು ಭಾನುವಾರ ರಾತ್ರಿಯಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದು, 11 ಮಂದಿಯನ್ನು ರಕ್ಷಿಸಿದೆ. ಸ್ಥಳೀಯರೂ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗುತ್ತಿದ್ದಾರೆ’ ಎಂದು ದೇವಘರ್ ಡಿಸಿ ಮಂಜುನಾಥ್ ಭಜಂತ್ರಿ ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ತಾಂತ್ರಿಕ ಸಮಸ್ಯೆ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಬಳಿಕ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ರೋಪ್‌ವೇಯನ್ನು ಖಾಸಗಿ ಕಂಪನಿ ನಿರ್ವಹಿಸುತ್ತಿತ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ.

ಜಾರ್ಖಂಡ್ ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರ, ತ್ರಿಕೂಟ ರೋಪ್‌ವೇ ಬಾಬಾ ವೈದ್ಯನಾಥ ದೇಗುಲದಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದು, 766 ಮೀಟರ್ ಉದ್ದವಿದೆ. ಪರ್ವತವು 392 ಮೀಟರ್ ಎತ್ತರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT