ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುತ್ತಮ ವಿವಿ: ಬೆಂಗಳೂರಿನ ಐಐಎಸ್‌ಸಿಯಂತ ವಿವಿ ನಮ್ಮದಲ್ಲ- ಜೆಎನ್‌ಯು ಉಪಕುಲಪತಿ

Last Updated 16 ಜುಲೈ 2022, 7:40 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್ಐಆರ್‌ಎಫ್‌) ರ‍್ಯಾಂಕಿಂಗ್‌ನಲ್ಲಿ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯವು 2ನೇ ಸ್ಥಾನ ಪಡೆದಿದ್ದು, ಇದು ವಿವಿಯ ಒಗ್ಗಟ್ಟಿನ ಶ್ರಮದ ಫಲ ಎಂದು ಉಪಕುಲಪತಿ ಸಂತಶ್ರೀ ಧುಲಿಪುಡಿ ಪಂಡಿತ್‌ ಶ್ಲಾಘಿಸಿದ್ದಾರೆ.

ಜೆಎನ್‌ಯು ವಿವಿ ಎದುರಿಸುತ್ತಿರುವಂತಹ ಸಮಸ್ಯೆಗಳನ್ನು ಬೇರೆ ಯಾವುದೇ ವಿವಿ ಎದುರಿಸುತ್ತಿಲ್ಲ ಎಂಬುದನ್ನು ಸಂತಶ್ರೀ ಉಲ್ಲೇಖಿಸಿದ್ದಾರೆ.

'ನಮಗೆ ಸಂತೋಷವಾಗಿದೆ. ಬೆಂಗಳೂರಿನ ಐಐಎಸ್‌ಸಿಯಂತಹ ವಿಶ್ವವಿದ್ಯಾಲಯ ಜೆಎನ್‌ಯು ಅಲ್ಲ. ಅದು ಸಂಶೋಧನಾ ಸಂಸ್ಥೆ. ಜೆಎನ್‌ಯು ಮತ್ತು ಐಐಎಸ್‌ಸಿಯನ್ನು ಜೊತೆಗಿಟ್ಟಾಗ ಸೇಬು ಮತ್ತು ಕಿತ್ತಳೆ ಹಣ್ಣುಗಳನ್ನು ಜೋಡಿಸಿಟ್ಟಂತೆ ಆಗುತ್ತದೆ. ವಿವಿಯ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಎಲ್ಲರಿಗೂ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ. ಇದು ಒಗ್ಗೂಡಿ ಕೆಲಸ ಮಾಡಿದ ಫಲ' ಎಂದು ಸಂತಶ್ರೀ ಹೇಳಿದ್ದಾರೆ.

ಜೆಎನ್‌ಯು ವಿವಿ ಎಲ್ಲವನ್ನೂ ಒಳಗೊಳ್ಳುವಿಕೆಯ ಸಂವೇದನೆಯೊಂದಿಗೆ ಸಾಕಷ್ಟು ವಿಷಯಗಳಲ್ಲಿ ಹೊಸಶೋಧಗಳನ್ನು ಮಾಡುತ್ತ ಮುಂದುವರಿದಿದೆ. ಭವಿಷ್ಯದಲ್ಲಿ ಇನ್ನೂ ಉತ್ತಮವಾದ ಕೆಲಸ ಮಾಡಲಿದೆ. ಭಾರತೀಯ ಭಾಷೆಗಳ ಶಾಲೆಯನ್ನು ವಿವಿ ಆರಂಭಿಸಲಿದೆ. ವಿಜ್ಞಾನ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ಇದರಿಂದ ಐಐಎಸ್‌ಸಿಯಂತೆ ಶ್ರೇಯವನ್ನು ಸಾಧಿಸಲಿದೆ ಎಂದು ಸಂತಶ್ರೀ ತಿಳಿಸಿದ್ದಾರೆ.

ನಮಗಿರುವಂತಹ ಸಮಸ್ಯೆಗಳು ಅವರಿಗಿಲ್ಲ. ಆದರೆ ಪ್ರತಿಭಾಶಾಲಿ ಮತ್ತು ವೈವಿಧ್ಯತೆ ಕಾರಣಕ್ಕೆ ನಾನು ಜೆಎನ್‌ಯುವನ್ನು ಇಷ್ಟಪಡುತ್ತೇನೆ. ನನ್ನ ಪ್ರಕಾರ ನಮ್ಮ ವಿವಿಯಂತೆ ವೈವಿಧ್ಯತೆಯನ್ನು ಹೊಂದಿರುವ ಬೇರೆ ವಿವಿ ಇಲ್ಲ. ಒಂದೇ ರೀತಿಯ ವಿಷಯವನ್ನು ಒಳಗೊಂಡ ಸಂಸ್ಥೆಗಳನ್ನು ಇಂತಹ ಶ್ರೇಯಾಂಕದಲ್ಲಿ ಸೇರಿಸಿಕೊಳ್ಳಬಾರದು ಎಂದೆನಿಸುತ್ತದೆ. ಸಾಕಷ್ಟು ಕೋರ್ಸ್‌ಗಳು ಇಲ್ಲಿವೆ ಮತ್ತು ನಾವು ರಾಜಕೀಯವಾಗಿಯೂ ಸ್ವಲ್ಪ ಕ್ರಿಯಾತ್ಮಕವಾಗಿದ್ದೇವೆ ಎಂದರು.

ಅವರಿಗೆ 9.5 ಅಂಕಗಳ ವಿದ್ಯಾರ್ಥಿಗಳು ಸಿಗುತ್ತಾರೆ ಮತ್ತು ಅವರನ್ನು 9.6 ಅಂಕಗಳ ವಿದ್ಯಾರ್ಥಿಗಳನ್ನಾಗಿಸುತ್ತಾರೆ. ಶುಲ್ಕ ₹10 ಲಕ್ಷವಿರುತ್ತದೆ. ನಮಗೆ 3 ರಿಂದ 5 ಅಂಕಗಳ ವಿದ್ಯಾರ್ಥಿಗಳು ಸಿಗುತ್ತಾರೆ ಮತ್ತು ₹10 ರಿಂದ ₹20 ಶುಲ್ಕದಲ್ಲಿ ಅವರನ್ನು 8-9 ಅಂಕಗಳ ವಿದ್ಯಾರ್ಥಿಗಳನ್ನಾಗಿಸುತ್ತೇವೆ. ಹಾಗಾಗಿ ಪರಸ್ಪರ ಹೋಲಿಕೆಯಾಗುವುದಿಲ್ಲ ಎಂದರು.

2022ನೇ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್‌) ರ‍್ಯಾಂಕಿಂಗ್‌ ಅನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಐಐಎಸ್‌ಸಿ ಅತ್ಯುನ್ನತ ಸಂಶೋಧನಾ ಸಂಸ್ಥೆಯ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದಿದೆ. ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳು ಕ್ರಮವಾಗಿ ಎರಡು ಮತ್ತು ಮೂರನೇ ರ‍್ಯಾಂಕ್‌ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT