ಬುಧವಾರ, ಮೇ 12, 2021
24 °C

ಸಮರ್ಪಕ ಕಾರಣವಿಲ್ಲದೆಯೇ ಜಾಮೀನು ಮಂಜೂರು ಒಪ್ಪಲಾಗದು: ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಮರ್ಪಕ ಕಾರಣಗಳಿಲ್ಲದೆಯೇ ಆರೋಪಿಗೆ ಜಾಮೀನು ನೀಡುವುದನ್ನು ಒಪ್ಪಲಾಗದು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮೇಲ್ನೋಟಕ್ಕೆ ಕಂಡುಬರುವ ಕೆಲವೇ ಅಂಶಗಳನ್ನು ಆಧರಿಸಿ ಆದೇಶ ಹೊರಡಿಸುವ ಮಟ್ಟಕ್ಕೆ ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯ ಆಡಳಿತ ಕುಸಿಯಬಾರದು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎಂ.ಆರ್‌.ಶಾ ಅವರಿರುವ ನ್ಯಾಯಪೀಠ ಹೇಳಿದೆ.

ಸೋನು ಯಾದವ್‌ ಎಂಬ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿ ಅಲಹಾಬಾದ್‌ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪಕ್ಕಕ್ಕಿರಿಸಿದ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸೋನು ಯಾದವ್‌ ಪತ್ನಿ 2019ರ ಫೆಬ್ರುವರಿ 8ರಂದು ಮೃತಪಟ್ಟಿದ್ದರು. ಅವರ ಮದುವೆಯಾಗಿ ಇನ್ನೂ 8 ತಿಂಗಳು ಸಹ ಕಳೆದಿರಲಿಲ್ಲ. ಆಕೆಯ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ.

‘ಆರೋಪಿಗೆ ಜಾಮೀನು ಮಂಜೂರು ಮಾಡಿ ಅಲಹಾಬಾದ್‌ ಹೈಕೋರ್ಟ್‌ 2020ರ ಡಿಸೆಂಬರ್‌ 1ರಂದು ಹೊರಡಿಸಿರುವ ಆದೇಶವು ನ್ಯಾಯದಾನ ಪ್ರಕ್ರಿಯೆಗೆ ಸಂಬಂಧಿಸಿ ರೂಢಿಯಲ್ಲಿರುವ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿದೆ. ಆರೋಪಿಗೆ ಜಾಮೀನು ನೀಡಿರುವುದಕ್ಕೆ ಯಾವುದೇ ಆಧಾರಗಳಿಲ್ಲ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಜಾಮೀನು ಅರ್ಜಿಯ ವಿಚಾರಣೆ ವೇಳೆ, ಪೂರಕ ಅಂಶಗಳ ಕುರಿತು ವಿಸ್ಥೃತ ತನಿಖೆ ಬೇಕಾಗಿಲ್ಲ ಎಂಬುದು ನಿಜ. ಆದರೆ, ಪ್ರತಿವಾದಿ ಮಂಡಿಸುವ ವಿಷಯ ಕುರಿತು ಅವಲೋಕನ ಅಗತ್ಯ’ ಎಂದೂ ನ್ಯಾಯಪೀಠ ಹೇಳಿದೆ.

‘ಇಂಥ ಪ್ರಕರಣಗಳ ವಿಷಯದಲ್ಲಿ ಹೈಕೋರ್ಟ್‌ ಉಪೇಕ್ಷೆ ತೋರಬಾರದು. ಈ ಪ್ರಕರಣದಲ್ಲಿ, ಮಹಿಳೆಗೆ ವರದಕ್ಷಿಣೆಗೆ ಸಂಬಂಧಿಸಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಇದೆ. ಈ ಆರೋಪದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು’ ಎಂದೂ ನ್ಯಾಯಪೀಠ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.