ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಾ ರನೌತ್‌ ಬಂಗಲೆ ನೆಲಸಮಗೊಳಿಸುವ ಆದೇಶ ಅನೂರ್ಜಿತ: ಬಾಂಬೆ ಹೈಕೋರ್ಟ್‌

Last Updated 27 ನವೆಂಬರ್ 2020, 9:28 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ಬಂಗಲೆಯ ಕೆಲಭಾಗವನ್ನು ಕೆಡವಿರುವ ಬೃಹನ್‌ ಮುಂಬೈ ಮಹಾನಗರಪಾಲಿಕೆಯ (ಬಿಎಂಸಿ) ಕ್ರಮ ದುರುದ್ದೇಶದಿಂದ ಕೂಡಿದೆ. ಇದರಿಂದ ಕಂಗನಾ ಅವರಿಗೆ ಗಣನೀಯ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯವು ಬಿಎಂಸಿ ಆದೇಶವನ್ನು ಶುಕ್ರವಾರ ಅನೂರ್ಜಿತಗೊಳಿಸಿದೆ. ಯಾವುದೇ ಪ್ರಜೆಯ ವಿರುದ್ಧ ‘ತೋಳ್ಭಲ’ ಪ್ರದರ್ಶಿಸುವುದನ್ನು ಸಮ್ಮತಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಸೆಪ್ಟೆಂಬರ್‌ 9ರಂದು ಬಾಂದ್ರಾದಲ್ಲಿರುವ ಕಂಗನಾ ರನೌತ್‌ ಅವರ ಬಂಗಲೆಯ ಒಂದು ಭಾಗವನ್ನು ಬಿಎಂಸಿ ನೆಲಸಮಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಟಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಎಸ್‌.ಜೆ.ಕಥಾವಾಲಾ ಮತ್ತು ಆರ್‌.ಐ.ಚಾಗ್ಲಾ ಅವರಿದ್ದ ಪೀಠ ಈ ಆದೇಶ ನೀಡಿದೆ.

ಬಾಂದ್ರಾದ ಪಾಲಿಹಿಲ್‌ನಲ್ಲಿರುವ ತಮ್ಮ ಬಂಗ್ಲೆಯನ್ನು ಸೆಪ್ಟೆಂಬರ್‌ 9ರಂದು ನೆಲಸಮಗೊಳಿಸುವ ಬಿಎಂಸಿ ಕಾರ್ಯಾಚರಣೆ ವಿರುದ್ಧ ಕಂಗನಾ, ನ್ಯಾಯಾಲಯದ ಮೊರೆಹೋಗಿದ್ದರು. ಬಿಎಂಸಿ ತಮಗೆ ₹2 ಕೋಟಿ ನಷ್ಟಪರಿಹಾರ ಕೊಡಬೇಕು ಮತ್ತು ಬಿಎಂಸಿ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.

ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಹೈಕೋರ್ಟ್‌ ಅಂದೇ ಆದೇಶಿಸಿತ್ತು.

ಕಾರ್ಯಾಚರಣೆಯಿಂದ ಬಂಗಲೆಗೆ ಆದ ಹಾನಿಯ ಬಗ್ಗೆ ನಟಿ ಮತ್ತು ಪಾಲಿಕೆ ಜೊತೆ ಪರಿಶೀಲಿಸಿ ಪರಿಹಾರದ ಮೊತ್ತವನ್ನು ಅಂದಾಜು ಮಾಡಲು ಮೌಲ್ಯಮಾಪಕರನ್ನು ನೇಮಿಸುವುದಾಗಿ ನ್ಯಾಯಾಲಯ ತಿಳಿಸಿತು.

2021ರ ಮಾರ್ಚ್‌ ತಿಂಗಳೊಳಗೆ ಪರಿಹಾರದ ಬಗ್ಗೆ ಸೂಕ್ತ ಆದೇಶ ಪ್ರಕಟಿಸಲಾಗುವುದು ಎಂದು ನ್ಯಾಯಾಲಯಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT