ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಸಮೀಕ್ಷೆ | ಕೊಳದ ಹತ್ತಿರ ಶಿವಲಿಂಗ ಪತ್ತೆ: ಹಿಂದೂ ಪರ ವಕೀಲ

ಜ್ಞಾನವಾಪಿ ಸಮೀಕ್ಷೆ: ಸಿಕ್ಕಿದ್ದು ಕಾರಂಜಿಯ ಬಿಡಿಭಾಗ ಎಂದ ಮಸೀದಿ ವಕ್ತಾರ
Last Updated 16 ಮೇ 2022, 18:27 IST
ಅಕ್ಷರ ಗಾತ್ರ

ವಾರಾಣಸಿ : ಕಾಶಿ ವಿಶ್ವನಾಥ ಮಂದಿರದ ಸಮೀಪದಲ್ಲಿ ಇರುವ ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಕೊಳದ ಹತ್ತಿರ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಕಕ್ಷಿದಾರರ ಪರ ವಕೀಲಮದನ್‌ ಮೋಹನ್‌ ಯಾದವ್‌ ಸೋಮವಾರ ಹೇಳಿದ್ದಾರೆ.ಆದರೆ, ಇದನ್ನು ಮಸೀದಿ ಆಡಳಿತ ಮಂಡಳಿಯ ವಕ್ತಾರ ಅಲ್ಲಗಳೆದಿದ್ದಾರೆ.

ನ್ಯಾಯಾಲಯದ ನಿರ್ದೇಶನದಂತೆ ನಡೆದ ವಿಡಿಯೊ ಚಿತ್ರೀಕರಣ ಸಹಿತ ಸಮೀಕ್ಷೆಯ ಸಂದರ್ಭದಲ್ಲಿ ಶಿವಲಿಂಗ ಸಿಕ್ಕಿತು ಎಂದು ಹಿಂದೂ ಕಕ್ಷಿದಾರರ ಪರ ವಕೀಲರು ಹೇಳಿದ್ದಾರೆ. ಹಾಗಾಗಿ, ಈ ಪ‍್ರದೇಶಕ್ಕೆ ಪ್ರವೇಶ ನಿರ್ಬಂಧಿಸಿ, ಅಗತ್ಯ ಭದ್ರತೆ ಒದಗಿಸುವಂತೆ ಸಿವಿಲ್‌ ನ್ಯಾಯಾಧೀಶ ರವಿ ಕುಮಾರ್‌ ದಿವಾಕರ್‌ ಆದೇಶಿಸಿದ್ದಾರೆ.

ಸಮೀಕ್ಷೆ ಸಂದರ್ಭದಲ್ಲಿ ಸಿಕ್ಕಿದ ವಸ್ತುವು ಕಾರಂಜಿಯ ಬಿಡಿಭಾಗ ಎಂದು ಮಸೀದಿಯ ಆಡಳಿತ ಮಂಡಳಿಯ ವಕ್ತಾರಸುದ್ದಿ ವಾಹಿನಿಯೊಂದಕ್ಕೆ ಹೇಳಿದ್ದಾರೆ. ಮಸೀದಿಯ ಪರ ವಕೀಲರ ವಾದವನ್ನು ಸಂಪೂರ್ಣವಾಗಿ ಆಲಿಸದೆಯೇ ಪ್ರವೇಶ ನಿರ್ಬಂಧ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮಸೀದಿಗೆ ಬಂದ ಮುಸ್ಲಿಮರು ನಮಾಜ್‌ಗೆ ಮುನ್ನ ಶುದ್ಧೀಕರಣ ವಿಧಿಗಾಗಿ ಬಳಸುವ ಕೊಳದ ಸಮೀಪದಲ್ಲಿ ಶಿವಲಿಂಗ ಪತ್ತೆಯಾಯಿತು ಎಂದು ಹಿಂದೂ ಕಕ್ಷಿದಾರರ ವಕೀಲರು ಹೇಳಿದ್ದಾರೆ. ಸಮೀಕ್ಷೆಯ ಕೊನೆಯ ದಿನ ಶಿವಲಿಂಗ ಸಿಕ್ಕಿದೆ.

ಈಗಿನ ಬೆಳವಣಿಗೆಯು ತೃಪ‍್ತಿ ತಂದಿದೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಹೇಳಿದ್ದಾರೆ. ಬಾಬರಿ ಮಸೀದಿಯ ನಂತರ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಮುಸ್ಲಿಮರು ಸಿದ್ಧರಿಲ್ಲ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಹಿಂದೂ ಕಕ್ಷಿದಾರರ ಪರ ವಕೀಲರ ಕೋರಿಕೆಯಂತೆ ನ್ಯಾಯಾಧೀಶರು ಪ್ರವೇಶ ನಿರ್ಬಂಧ ಆದೇಶ ನೀಡಿದ್ದಾರೆ.

ಕೋರ್ಟ್‌ ನೇಮಿಸಿದ ಕಮಿಷನರ್‌ ನೇತೃತ್ವದಲ್ಲಿ ಸಮೀಕ್ಷೆ ಕಾರ್ಯ ನಡೆದಿದೆ. ಸಮೀಕ್ಷೆ ಸಂದರ್ಭದಲ್ಲಿ ಎರಡೂ ಕಡೆಯ ವಕೀಲರು ಹಾಜರಿದ್ದರು.

ಪ್ರವೇಶ ನಿರ್ಬಂಧದ ಪ್ರದೇಶದ ಭದ್ರತೆಯನ್ನು ಖಾತರಿಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತ ಮತ್ತು ವಾರಾಣಸಿಯಲ್ಲಿರುವ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಕಮಾಂಡೆಂಟ್‌ಗೆ ನ್ಯಾಯಾಲಯ ಸೂಚಿಸಿದೆ.

ಮಸೀದಿಯ ಗೋಡೆಯ ಹೊರಭಾಗದಲ್ಲಿರುವ ಮೂರ್ತಿಗಳಿಗೆ ನಿತ್ಯವೂ ಪೂಜೆ ನಡೆಸಲು ಅವಕಾಶ ಕೊಡಬೇಕು ಎಂದು ಕೋರಿ ಮಹಿಳೆಯರ ಗುಂಪೊಂದು ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯ ಸಂದರ್ಭದಲ್ಲಿಯೇ ಮಸೀದಿಯೊಳಗೆ ಸಮೀಕ್ಷೆಗೆ ಆದೇಶ ನೀಡಲಾಗಿತ್ತು. ಸಮೀಕ್ಷೆಗೆ ನೇಮಿಸಿದ ಕಮಿಷನರ್‌ ಪಕ್ಷಪಾತಿಯಾಗಿದ್ದಾರೆ ಎಂದು ಮಸೀದಿ ಆಡಳಿತವು ಆರೋಪಿಸಿತ್ತು. ಹೀಗಾಗಿ, ಸಮೀಕ್ಷೆ ಸ್ವಲ್ಪ ಕಾಲ ಸ್ಥಗಿತಗೊಂಡಿತ್ತು.

ಸೋಮವಾರದ ಸಮೀಕ್ಷೆಯು ಬೆಳಿಗ್ಗೆ 8 ಗಂಟೆಗೆ ಆರಂಭವಾಗಿ 10.15ರವರೆಗೆ ನಡೆಯಿತು.

‘ಸಮೀಕ್ಷೆ ಕೆಲಸವು ಎಲ್ಲರಿಗೂ ತೃಪ್ತಿ ತಂದಿದೆ’ ಎಂದು ವಾರಾಣಸಿ ಜಿಲ್ಲಾಧಿಕಾರಿ ಕೌಶಲ್‌ ರಾಜ್ ಶರ್ಮಾ ಹೇಳಿದ್ದಾರೆ.

ಮುಂದಿನ ಆದೇಶ ಇಂದು?:ಸಮೀಕ್ಷೆಯ ನೇತೃತ್ವ ವಹಿಸಿದ್ದ ಕಮಿಷನರ್‌, ನ್ಯಾಯಾಲಯಕ್ಕೆ ವರದಿ ಕೊಡಲು ಮಂಗಳವಾರದ ವರೆಗೆ ಸಮಯ ನೀಡಲಾಗಿದೆ. ಅವರು ವರದಿ ಕೊಟ್ಟ ಬಳಿಕವೇ, ನ್ಯಾಯಾಲಯವು ಮುಂದಿನ ಆದೇಶ ನೀಡುವ ಸಾಧ್ಯತೆ ಇದೆ.

ಮಂಗಳವಾರವೇ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮಸೀದಿಯಲ್ಲಿ ಏನು ಪತ್ತೆಯಾಗಿದೆ ಎಂಬ ಬಗ್ಗೆ ನ್ಯಾಯಾಲಯವು ಆದೇಶ ನೀಡುವವರೆಗೆ ಯಾರೂ ಏನನ್ನೂ ಹೇಳಬಾರದು ಎಂದು ಅವರು ಸೂಚಿಸಿದ್ದಾರೆ. ಮಸೀದಿಯಲ್ಲಿ ಏನು ಪತ್ತೆಯಾಯಿತು ಎಂಬ ಬಗ್ಗೆ ಯಾವುದೇ ವ್ಯಕ್ತಿ ಮಾಹಿತಿ ಬಹಿರಂಗಪಡಿಸಿದರೆ, ಪತ್ತೆಯಾದ ವಸ್ತುವಿನ ಅಧಿಕೃತತೆಯನ್ನು ದೃಢಪಡಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇಂದು

ಜ್ಞಾನವಾಪಿ ಮಸೀದಿಯಲ್ಲಿನ ಸಮೀಕ್ಷೆಯನ್ನು ನಿಲ್ಲಿಸಬೇಕು ಎಂದು ಕೋರಿ ಅಂಜುಮಾನ್‌ ಎ ಇಂತೆಜಮಿಯಾ ಸಂಸ್ಥೆಯು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ.

ಸಮೀಕ್ಷೆ ವಿಚಾರದಲ್ಲಿ ಮಧ್ಯಪ‍್ರವೇಶಿಸುವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌. ನರಸಿಂಹ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ.

ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಲು ಸುಪ್ರೀಂ ಕೋರ್ಟ್ ಇದೇ 13ರಂದು ನಿರಾಕರಿಸಿತ್ತು. ಬದಲಿಗೆ, ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

‘ದೇಗುಲ ಇದ್ದುದರ ಪುರಾವೆ’

ಜ್ಞಾನವಾಪಿ ಮಸೀದಿಯ ಸಮೀಪ‍ ಶಿವಲಿಂಗ ಸಿಕ್ಕಿರುವುದು ಅಲ್ಲಿ ಹಿಂದೆ ದೇವಾಲಯ ಇತ್ತು ಎಂಬುದರ ಪುರಾವೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹೇಳಿದೆ.

‘ಇದೊಂದು ಒಳ್ಳೆಯ ಸುದ್ದಿ. ಎರಡೂ ಕಡೆಯ ವಕೀಲರ ಸಮ್ಮುಖದಲ್ಲಿಯೇ ಶಿವಲಿಂಗ ಪತ್ತೆಯಾಗಿದೆ. ಶಿವಲಿಂಗ ಪತ್ತೆಯ ಹಿಂದಿನ ಕಾರಣ ಬಹಳ ಸ್ಪಷ್ಟ. ಶಿವಲಿಂಗ ಪತ್ತೆಯಾದ ಸ್ಥಳವು ಈಗಲೂ 1947ರಲ್ಲಿಯೂ ದೇವಾಲಯವಾಗಿತ್ತು ಎಂಬುದು ದೃಢಪಟ್ಟಿದೆ’ ಎಂದು ವಿಶ್ವ ಹಿಂದೂ ಪರಿಷತ್‌ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ್‌ ಹೇಳಿದ್ದಾರೆ.

‘ಈ ದೇಶದ ಪ್ರತಿಯೊಬ್ಬರೂ ಈ ಪುರಾವೆಯನ್ನು ಒಪ್ಪಿ, ಮನ್ನಣೆ ನೀಡುತ್ತಾರೆ ಎಂಬ ಭರವಸೆ ಇದೆ. ಅತ್ಯಂತ ಸ್ಪಷ್ಟ ಫಲಿತಾಂಶದತ್ತ ದೇಶವು ಸಾಗಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT