ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರತ್ತ ನಾವೂ ಕಲ್ಲು ತೂರಬೇಕಾಗುತ್ತದೆ: ಕಾಶ್ಮೀರಿ ಪಂಡಿತರ ಎಚ್ಚರಿಕೆ

ಕಣಿವೆ ತೊರೆಯಲು ಅವಕಾಶಕ್ಕೆ ಆಗ್ರಹ
Last Updated 4 ಜೂನ್ 2022, 5:05 IST
ಅಕ್ಷರ ಗಾತ್ರ

ಶ್ರೀನಗರ/ಜಮ್ಮು (ಪಿಟಿಐ/ನ್ಯೂಯಾರ್ಕ್‌ ಟೈಮ್ಸ್‌): ‘ಕಾಶ್ಮೀರ ಕಣಿವೆಯಿಂದ ಹೊರ ಹೋಗಲು ನಮಗೆ ಅವಕಾಶ ಮಾಡಿ. ಇಲ್ಲದಿದ್ದರೆ, ಪೊಲೀಸರತ್ತ ಕಾಶ್ಮೀರಿ ಪಂಡಿತರೂ ಕಲ್ಲು ತೂರಬೇಕಾಗುತ್ತದೆ’ ಎಂದು ಇಲ್ಲಿನ ಮತ್ತಾನ್‌ ಶಿಬಿರದಲ್ಲಿ ಇರುವ ಕಾಶ್ಮೀರಿ ಪಂಡಿತರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಾಶ್ಮೀರದಲ್ಲಿ ವಾಸ್ತವ್ಯ ಹೂಡಿರುವ ಕಾಶ್ಮೀರಿ ಪಂಡಿತರು, ಸರ್ಕಾರಿ ನೌಕರಿಯಲ್ಲಿರುವ ಹಿಂದೂಗಳು ಕಾಶ್ಮೀರವನ್ನು ತೊರೆಯಲು ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಶುಕ್ರವಾರ ತೀವ್ರತೆ ಪಡೆದಿದೆ. ಕಾಶ್ಮೀರದಿಂದ ತೆರವು ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಕಾಶ್ಮೀರ ಪಂಡಿತ ಸಂಘರ್ಷ ಸಮಿತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೆ, ಆ ಸಮುದಾಯದ ಜನರು ಮತ್ತೊಂದೆಡೆ ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ.

‘ಕಾಶ್ಮೀರದಲ್ಲಿ ಸೇವೆಯಲ್ಲಿರುವ ನಮ್ಮನ್ನು ಜಮ್ಮುವಿಗೆ ವರ್ಗಾವಣೆ ಮಾಡಿ. ನಾವು ಸೇವೆಗೆ ಹಿಂತಿರುಗುವು ದಿಲ್ಲ’ ಎಂದು ಕಾಶ್ಮೀರ ಶಿಕ್ಷಕರ ಸಂಘ ಟನೆಯ ಸದಸ್ಯರು ಜಮ್ಮುವಿನಲ್ಲಿ ನಡೆಸು ತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿರಿಸಿದೆ.

ಕಾಶ್ಮೀರಿ ಪಂಡಿತರೂ ಸೇರಿ ಧಾರ್ಮಿಕ ಅಲ್ಪಸಂಖ್ಯಾತರು ಕಾಶ್ಮೀರ ತೊರೆಯುವುದನ್ನು ಸರ್ಕಾರ ತಡೆ ಯುವುದಕ್ಕೂ ಮುನ್ನ ನೂರಾರು ಶಿಕ್ಷಕರು ಜಮ್ಮುವಿಗೆ ಪರಾರಿಯಾಗಿದ್ದರು. ಅವರೆಲ್ಲಾ ಈಗ ಪ್ರತಿಭಟನೆ ಮೊರೆ ಹೋಗಿದ್ದಾರೆ. ಪ್ರಧಾನಿ ಉದ್ಯೋಗ ಖಾತರಿ ಯೋಜನೆ ಅಡಿ 4,000 ಜನರನ್ನುಕಾಶ್ಮೀರದಲ್ಲಿ ಸೇವೆಗೆ2008ರಲ್ಲಿ ನಿಯೋಜಿಸಲಾಗಿತ್ತು. ಅವರಲ್ಲಿ ಬಹಳಷ್ಟು ಮಂದಿ ಈಗ ಕಾಶ್ಮೀರ ತೊರೆದಿದ್ದಾರೆ. ಶಿಕ್ಷಕರ ಹೋರಾಟದಲ್ಲಿ ಈ ನೌಕರರೂ ದನಿಗೂಡಿಸಿದ್ದಾರೆ.

ಮತ್ತೊಂದೆಡೆ ಕಾಶ್ಮೀರದಲ್ಲಿನ ವಿಶೇಷ ಶಿಬಿರಗಳಲ್ಲಿ ಇರುವ ಕಾಶ್ಮೀರಿ ಪಂಡಿತರು, ಸರ್ಕಾರದ ಕ್ರಮವನ್ನು ಖಂಡಿಸುತ್ತಿದ್ದಾರೆ. ‘ಇಲ್ಲಿ ನಮ್ಮನ್ನು ಕೊಲ್ಲಲಾಗುತ್ತಿದೆ. ನಾವು ಹೇಗಾದರೂ ಸರಿ ಬದುಕಬೇಕು ಎಂದು ನಿರ್ಧರಿಸಿದ್ದೇವೆ. ಇಲ್ಲಿಂದ ಹೊರಗೆ ಹೋದರೆ ಮಾತ್ರ ಜೀವಂತವಾಗಿ ಇರಲು ಸಾಧ್ಯ’ ಎಂದು ಅನಂತನಾಗ್‌ ಜಿಲ್ಲೆಯ ಮತ್ತಾನ್‌ ಶಿಬಿರದಲ್ಲಿ ಇರುವ ಕಾಶ್ಮೀರ ಪಂಡಿತರು ಹೇಳಿದ್ದಾರೆ.

‘ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಾಸ್ತವ ಹಾಗಿಲ್ಲ. ಸರ್ಕಾರ ಭದ್ರತೆಯ ಭರವಸೆ ನೀಡಿದ ಕಾರಣ 10 ವರ್ಷಗಳ ಹಿಂದೆ ಕಾಶ್ಮೀರಕ್ಕೆ ವಾಪಸ್ ಆಗಿದ್ದೆವು. ಈಚಿನವರೆಗೂ ಎಲ್ಲಾ ಚೆನ್ನಾಗಿಯೇ ಇತ್ತು. ಆದರೆ ಎರಡೂವರೆ ವರ್ಷದ ಹಿಂದಿನಿಂದ ಕಾಶ್ಮೀರ ಪಂಡಿತರ ಹತ್ಯೆ ಮತ್ತೆ ಆರಂಭವಾಗಿದೆ. ಸರ್ಕಾರ ಇದನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ’ ಎಂದು ಮತ್ತಾನ್ ಶಿಬಿರದ ನಿವಾಸಿಗಳು ಆರೋಪಿಸಿದ್ದಾರೆ.

‘ಕಾಶ್ಮೀರ ಕಣಿವೆಯಿಂದ ನಮ್ಮನ್ನು ಸ್ಥಳಾಂತರ ಮಾಡುವ ಸಂಬಂಧ, ಲೆಫ್ಟಿನೆಂಟ್ ಗವರ್ನರ್ ಮತ್ತು ಭದ್ರತಾ ಅಧಿಕಾರಿಗಳನ್ನು ನಿಯೋಗವೊಂದು ಭೇಟಿ ಮಾಡಿತ್ತು. ಕಾಶ್ಮೀರ ಕಣಿವೆಯಲ್ಲಿನ ಎಲ್ಲಾ ಉಗ್ರರನ್ನು ಮಣಿಸಲು ಇನ್ನೂ ಮೂರು ವರ್ಷ ಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ಅಲ್ಲಿಯವರೆಗೂ ನಾವು ಇಲ್ಲೇ ಇರಲು ಸಾಧ್ಯವೇ? ಈ ವಿಚಾರ ಗೊತ್ತಾದ ನಂತರ ಶಿಬಿರದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ’ ಎಂದು ಮತ್ತಾನ್‌ ಶಿಬಿರದ ನಿವಾಸಿ ರಂಜನಾ ಜೋತ್ಷಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT