ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಸೇರಿ 6 ಭರವಸೆ ನೀಡಿದ ಕೇಜ್ರಿವಾಲ್

Last Updated 2 ಸೆಪ್ಟೆಂಬರ್ 2022, 14:52 IST
ಅಕ್ಷರ ಗಾತ್ರ

ಅಹಮದಾಬಾದ್: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಗುಜರಾತ್‌ನ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಭರ್ಜರಿ ಪ್ರಚಾರ ಕೈಗೊಂಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಸೇರಿದಂತೆ 6 ಪ್ರಮುಖ ಭರವಸೆಗಳನ್ನು ಈಡೇರಿಸುವುದಾಗಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಾಗ್ದಾನ ಮಾಡಿದ್ದಾರೆ.

ದ್ವಾರಕಾ ಪಟ್ಟಣದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದರೆ ರೈತರ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಅಡಿ ಖರೀದಿಸಲು ಯೋಜನೆ ಜಾರಿಮಾಡುವುದಾಗಿ ಹೇಳಿದ್ದಾರೆ. ಬಿಜೆ‍ಪಿ ನೇತೃತ್ವದ ಸರ್ಕಾರ ನಡೆಸಿರುವ ಭೂಸರ್ವೆಯಿಂದ ನೊಂದಿರುವ ರೈತರ ಅನುಕೂಲಕ್ಕಾಗಿ ಕೃಷಿ ಭೂಮಿಯ ಮರು ಸರ್ವೆ ಮಾಡಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

‘ಗೋಧಿ, ಭತ್ತ, ಹತ್ತಿ, ಕಡಳೆಕಾಳು ಮತ್ತು ಕಡಳೆಬೀಜಗಳನ್ನು ಮೊದಲಿಗೆ ಎಂಎಸ್‌ಪಿ ವ್ಯಾಪ್ತಿಗೆ ತರಲಾಗುವುದು. ಬಳಿಕ, ಹಂತ ಹಂತವಾಗಿ ಮತ್ತಷ್ಟು ಕೃಷಿ ಉತ್ಪನ್ನಗಳನ್ನು ಸೇರಿಸಲಾಗುವುದು. ಗುಜರಾತ್‌ನಲ್ಲಿ ರೈತರ ಕೃಷಿ ಚಟುವಟಿಕೆಗೆ ರಾತ್ರಿ ವೇಳೆ ವಿದ್ಯುತ್ ನೀಡಲಾಗುತ್ತಿದೆ ಎಂದು ನಾನು ಕೇಳಿದ್ದೇನೆ. ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹಗಲಿನಲ್ಲೂ ಕೃಷಿಗೆ 12 ಗಂಟೆ ವಿದ್ಯುತ್ ಒದಗಿಸಲಾಗುವುದು’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ ಆರ್ ಪಾಟೀಲ್ ತಮ್ಮ ಮನೆಗಳಿಗೆ 24 ಗಂಟೆ ವಿದ್ಯುತ್ ಸರಬರಾಜು ಹೊಂದಿರುವಾಗ ರೈತರಿಗೆ ಮಾತ್ರ ರಾತ್ರಿ ವೇಳೆ ವಿದ್ಯುತ್ ಒದಗಿಸುವುದು ಅನ್ಯಾಯ ಎಂದು ಅವರು ಹೇಳಿದ್ದಾರೆ.

ಇದೇವೇಳೆ, ಹವಾಮಾನ ವೈಪರಿತ್ಯದಿಂದ ಬೆಳೆ ಹಾನಿಯಾದರೆ ಪ್ರತಿ ಎಕರೆಗೆ ₹ 20,000 ಪರಿಹಾರ ಒದಗಿಸಲಾಗುವುದು ಎಂದ ಕೇಜ್ರಿವಾಲ್, ಸರ್ಕಾರ ರಚಿಸಿ ಒಂದು ವರ್ಷ ಕಳೆಯುವುದರೊಳಗೆ ನರ್ಮದಾ ಅಣೆಕಟ್ಟು ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ದೆಹಲಿಯಲ್ಲಿ ವಿಶ್ವಾಸಮತ ಗೆದ್ದು ವಿಶ್ವಾಸದಲ್ಲಿರುವ ಕೇಜ್ರಿವಾಲ್, ನಮ್ಮ ಶಾಸಕರನ್ನು ಖರೀದಿಸಲು ಬಿಜೆಪಿ ತಲಾ ₹ 20 ಕೋಟಿ ಆಫರ್ ನೀಡಿತ್ತು. ಈವರಗೆ ದೇಶದಾದ್ಯಂತ ₹ 6,500 ಕೋಟಿ ವೆಚ್ಚ ಮಾಡಿ 277 ಶಾಸಕರನ್ನು ಬಿಜೆಪಿ ಖರೀದಿಸಿದೆ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT