ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ವಿಶ್ವವಿದ್ಯಾಲಯಗಳ ಕಾನೂನು ತಿದ್ದುಪಡಿ ಮಸೂದೆ ಮಂಡನೆ

Last Updated 7 ಡಿಸೆಂಬರ್ 2022, 14:33 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ಕೆಳಗಿಳಿಸಿ ಶಿಕ್ಷಣ ತಜ್ಞರನ್ನು ಆ ಹುದ್ದೆಗೆ ನೇಮಿಸಲು ಅವಕಾಶ ನೀಡುವ ವಿಶ್ವವಿದ್ಯಾಲಯಗಳ ಕಾನೂನು (ತಿದ್ದುಪಡಿ) ಮಸೂದೆಯನ್ನು ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿತು.

ವಿ.ವಿಗಳಲ್ಲಿ ಕುಲಪತಿಗಳ ನೇಮಕಾತಿ ಸೇರಿ ಹಲವು ವಿಚಾರಗಳ ಸಂಬಂಧ ರಾಜ್ಯದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಿರುವ ನಡುವೆಯೇಕಾನೂನು ಸಚಿವ ಪಿ. ರಾಜೀವ್‌ ಅವರು ಈ ಮಸೂದೆಯನ್ನು ಮಂಡಿಸಿದರು.

ಈ ಮಸೂದೆ ಪ್ರಕಾರ, ವಿ.ವಿ ಕುಲಾಧಿಪತಿ ಸ್ಥಾನಕ್ಕೆ ಉತ್ತಮ ಹೆಸರು ಹೊಂದಿರುವ ಶಿಕ್ಷಣ ತಜ್ಞರು ಅಥವಾ ಶಿಕ್ಷಣ, ತಂತ್ರಜ್ಞಾನ, ಕೃಷಿ, ವೈದ್ಯಕೀಯ ಸೇರಿ ಇತರ ಕ್ಷೇತ್ರಗಳ ತಜ್ಞರನ್ನು ನೇಮಕ ಮಾಡಬಹುದು. ಈ ನಿಯಮದ ಪ್ರಕಾರ ಕುಲಾಧಿಪತಿಗಳ ಅಧಿಕಾರಾವಧಿ ಐದು ವರ್ಷ ಇರಲಿದೆ. ಇದು ಗೌರವದ ಹುದ್ದೆಯಾಗಿರುತ್ತದೆ. ಎರಡನೇ ಅವಧಿಗೆ ಅವರನ್ನೇ ಮರುನೇಮಕ ಮಾಡಲು ಸರ್ಕಾರಕ್ಕೆ ಅವಕಾಶ ಇರುತ್ತದೆ. ವಿ.ವಿಗಳ ಮುಖ್ಯ ಕಚೇರಿಯಲ್ಲಿ ಕುಲಾಧಿಪತಿ ಅವರ ಕಚೇರಿ ಇರುತ್ತದೆ. ಅವರ ಕೆಲಸಕ್ಕೆ ಅನುಕೂಲವಾಗುವಂತೆ ಸಿಬ್ಬಂದಿ ಒದಗಿಸಲಾಗುವುದು ಎಂದು ಮಸೂದೆಯಲ್ಲಿ ಹೇಳಲಾಗಿದೆ.

ವಿರೋಧ ಪಕ್ಷಗಳ ಆಕ್ಷೇಪ: ಈ ಮಸೂದೆಗೆ ವಿರೋಧಪಕ್ಷವಾದ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಿದರೆ ಸಾಕಷ್ಟು ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಮಸೂದೆಯನ್ನು ಆತುರದಲ್ಲಿ ಸಿದ್ಧಪಡಿಸಿರುವುದರಿಂದ ಅಸ್ಪಷ್ಟವಾಗಿದೆ. ಅಲ್ಲದೆ ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) ಮಾರ್ಗಸೂಚಿಗಳ ಉಲ್ಲಂಘನೆಯಾಗಲಿದೆ. ಹಾಗಾಗಿ ಈ ಹೊಸ ನಿಯಮವನ್ನು ರಾಜ್ಯ ಕಾಯ್ದೆ ಅಡಿ ಪರಿಚಯಿಸಿದರೆ ಅದು ನಿಲ್ಲುವುದಿಲ್ಲ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಹೇಳಿದರು.

ಹೊಸ ನಿಯಮದಡಿ ಕುಲಾಧಿಪತಿ ಹುದ್ದೆಗೇರುವ ಅಭ್ಯರ್ಥಿಯ ವಯೋಮಿತಿ, ಶೈಕ್ಷಣಿಕ ಅರ್ಹತೆ ನಮೂದಾಗಿಲ್ಲ. ಇದರರ್ಥ ಸರ್ಕಾರ ತನಗಿಷ್ಟ ಬಂದವರನ್ನು ಕುಲಾಧಿಪತಿಯಾಗಿ ನೇಮಕ ಮಾಡಬಹುದು ಎಂದಾಗಿದೆ. ಇದು ವಿ.ವಿಗಳ ಸ್ವಾಯತ್ತೆಯನ್ನು ಹಾಳುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಹೊಸದಾಗಿ ಮಂಡಿಸಿರುವ ಮಸೂದೆಯು ಹಲವಾರು ನ್ಯೂನ್ಯತೆಗಳಿಂದ ಕೂಡಿದೆ. ಹಾಗಾಗಿ, ಇದನ್ನು ಹಿಂಪಡೆದು ಹೊಸ ಮಸೂದೆಯನ್ನು ಸಿದ್ಧಪಡಿಸುವಂತೆ ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ. ಆದರೆ ಈ ಆಕ್ಷೇಪವನ್ನು ಗೃಹ ಸಚಿವರು ನಿರಾಕರಿಸಿದ್ದಾರೆ. ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳು ಕೇವಲ ‘ರಾಜಕೀಯ ಅಂಶ’ಗಳಾಗಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT