ಶನಿವಾರ, ಜುಲೈ 2, 2022
27 °C

'ಫಡ್ನಾ ಲಿಖ್ನಾ' ಅಭಿಯಾನ: 10 ವರ್ಷಗಳ ನಂತರ ಕೇರಳಕ್ಕೆ ಕೇಂದ್ರದ ಅನುದಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ : ಹತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೇರಳ ಸರ್ಕಾರವು ಸಾಕ್ಷರತಾ ಆಂದೋಲನಕ್ಕಾಗಿ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲಿದೆ.

ದೇಶದ ಅನಕ್ಷರತೆಯ ಮಟ್ಟವನ್ನು 2030ರ ವೇಳೆಗೆ ಸಂಪೂರ್ಣವಾಗಿ ತೊಡೆದು ಹಾಕಲು ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆಯ ’ಫಡ್ನಾ ಲಿಖ್ನಾ‘ ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿ ಸಾಕ್ಷರತಾ ಯೋಜನೆಗಳಿಗಾಗಿ ಕೇರಳ ಸರ್ಕಾರವು ಕೇಂದ್ರದ ಅನುದಾನ ಪಡೆಯಲಿದೆ.

ದೇಶದಲ್ಲಿ ಓದು ಬರಹ ಗೊತ್ತಿಲ್ಲದ, ಅಂಕಿ ಅಂಶಗಳ ತಿಳುವಳಿಕೆಯಿಲ್ಲದ 57 ಲಕ್ಷ ಜನರಿದ್ದಾರೆ. ಗ್ರಾಮೀಣ ಹಾಗೂ ನಗರ ಭಾಗದ 15 ವರ್ಷ ಮೇಲಿನ ಶಿಕ್ಷಣ ವಂಚಿತರಿಗೆ ಅಕ್ಷರಾಭ್ಯಾಸ ಪರಿಚಯಿಸುವುದು ಈ ಅಭಿಯಾನದ ಉದ್ದೇಶ.

‘ಶೇ 100ರಷ್ಟು ಸಾಕ್ಷರತಾ ಪ್ರಮಾಣ ಸಾಧಿಸಿದ ರಾಜ್ಯ ಕೇರಳ. ಇದೀಗ ಹತ್ತು ವರ್ಷಗಳ ನಂತರ ಸಾಕ್ಷರತಾ ಯೋಜನೆಗಾಗಿ ಕೇಂದ್ರದಿಂದ ನಿಧಿಯನ್ನು ಸ್ವೀಕರಿಸುತ್ತಿದೆ. 2009ರ ಬಳಿಕ ಇಂತಹ ಸಾಕ್ಷರತಾ ಸಂಬಂಧಿತ ಕಾರ್ಯಕ್ರಮಗಳಿಗೆ ಕೇಂದ್ರದಿಂದ ಕೇರಳ ಸರ್ಕಾರವು ಅನುದಾನವನ್ನು ಪಡೆದುಕೊಂಡಿಲ್ಲ’ ಎಂದು ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ (ಕೆಎಸ್‌ಎಲ್‌ಎಂಎ) ತಿಳಿಸಿದೆ.

ಈಗ ಕೇರಳವೂ ಕೇಂದ್ರದ ಹೊಸ ’ಫಡ್ನಾ ಲಿಖ್ನಾ‘ ಅಭಿಯಾನದ ಭಾಗವಾಗಿದೆ. ಇದು ಒಟ್ಟು ₹4.74 ಕೋಟಿ ಮೌಲ್ಯದ ಯೋಜನೆ. ಕೇಂದ್ರ ₹2.64 ಕೋಟಿ ಹಾಗೂ ರಾಜ್ಯ ಸರ್ಕಾರ ₹1.90 ಕೋಟಿ ವಿನಿಯೋಗಿಸಲಿದೆ‘ ಎಂದು ಕೆಎಸ್‌ಎಲ್‌ಎಂಎ ನಿರ್ದೇಶಕ ಪಿ.ಎಸ್‌.ಶ್ರೀಕಲಾ ಮಾಹಿತಿ ನೀಡಿದ್ದಾರೆ.

ಕಡಿಮೆ ಸಾಕ್ಷರತೆ ಮಟ್ಟ ಹೊಂದಿರುವ ಜಿಲ್ಲೆಗಳ ಅನಕ್ಷರಸ್ಥ ಮಹಿಳೆಯರು, ಪರಿಶಿಷ್ಟ ಜಾತಿ, ಬುಡಕಟ್ಟು, ಕರಾವಳಿ ಭಾಗದ ಜನರನ್ನು ಆದ್ಯತೆಯ ಮೇರೆಗೆ ಈ ಅಭಿಯಾನದಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳೆಂದು ಗುರುತಿಸಲಾಗಿರುವ ವಯನಾಡ್‌, ಇಡುಕ್ಕಿ, ಪಾಲಕ್ಕಾಡ್‌ ಹಾಗೂ ಮಲಪ್ಪುರಂಗಳಲ್ಲಿ 1.15 ಲಕ್ಷ ಅನಕ್ಷರಸ್ಥರಿದ್ದಾರೆ. ಅಲ್ಲಿ ಮೊದಲ ಹಂತದಲ್ಲಿ ಅಭಿಯಾನ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

2011ರ ಜನಗಣತಿ ಪ್ರಕಾರ ಈ ಜಿಲ್ಲೆಗಳಲ್ಲಿ 6,12,624 ಅನಕ್ಷರಸ್ಥರಿದ್ದರು. ಇದರಲ್ಲಿ 4,27,166 ಮಂದಿ ಮಹಿಳೆಯರಾಗಿದ್ದರು. ಈ ಯೋಜನೆ ಆರಂಭಕ್ಕೆ ಮೊದಲು ಸರ್ವೇ ನಡೆಸಿ, ಅವರನ್ನು ಪತ್ತೆ ಹಚ್ಚಿದ ಬಳಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು