ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಸಿರಿಯಾ ಆಗಿ ಬದಲಾಗುತ್ತಿದೆ: ಬಿಜೆಪಿ ಕಳವಳ

Last Updated 23 ನವೆಂಬರ್ 2021, 14:49 IST
ಅಕ್ಷರ ಗಾತ್ರ

ನವದೆಹಲಿ: ಕೇರಳದಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣದ ಹಿಂದೆ ಪಾಪುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿ, ರಾಜ್ಯವು ನಿಧಾನವಾಗಿ ಸಿರಿಯಾ ಆಗಿ ಬದಲಾಗುತ್ತಿದೆ ಎಂದು ಕಿಡಿಕಾರಿದೆ.

ರಾಷ್ಟ್ರ ರಾಜಧಾನಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ಅವರು ಕೇಂದ್ರ ಸಚಿವರಾದ ವಿ. ಮುರುಳೀಧರನ್ ಮತ್ತು ರಾಜೀವ್ ಚಂದ್ರಶೇಖರ್ ಅವರೊಂದಿಗೆ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. 'ಕೇರಳ ನಿಧಾನವಾಗಿ ಸಿರಿಯಾ ಆಗಿ ಬದಲಾಗುತ್ತಿದೆ. ಇದು ಶಾಂತಿಯನ್ನು ಬಯಸುವ ಕೇರಳದ ಸಾಮಾನ್ಯ ವ್ಯಕ್ತಿಯಅಭಿಪ್ರಾಯವಾಗಿದೆ' ಎಂದಿದ್ದಾರೆ.

ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಸುರೇಂದ್ರನ್, 'ಇಸ್ಲಾಮಿಕ್ ಉಗ್ರ ಸಂಘಟನೆಯಾಗಿರುವ ಪಿಎಫ್‌ಐ ಕಳೆದ 20 ದಿನಗಳಲ್ಲಿ ನಡೆಸಿರುವ ಭೀಕರ ಕೊಲೆಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಹತ್ಯೆಯಾದವರಲ್ಲಿ ಒಬ್ಬ ವ್ಯಕ್ತಿಯ ಮೇಲೆ ಹೆಂಡತಿಯೊಂದಿಗೆಬೈಕ್‌ನಲ್ಲಿ ಹೋಗುತ್ತಿದ್ದಾಗ ದಾಳಿ ನಡೆಸಲಾಗಿತ್ತು.ಶವಪರೀಕ್ಷೆ ವರದಿಯ ಪ್ರಕಾರ ಮೃತನ ದೇಹದ ಮೇಲೆ 36 ಕಡೆ ಗಾಯಗಳಾಗಿದ್ದವು. ಹತ್ಯೆಗಾಗಿ ಹರಿತವಾದ ಆಯುಧಗಳನ್ನು ಬಳಸಲಾಗಿತ್ತು. ಪಿಎಫ್‌ಐನೊಂದಿಗೆ ನಂಟು ಹೊಂದಿರುವ, ತರಬೇತಿ ಪಡೆದಿರುವ ಕೊಲೆಗಾರರು ಈ ಕೃತ್ಯದ ಹಿಂದೆ ಇದ್ದಾರೆ' ಎಂದು ದೂರಿದ್ದಾರೆ.

'ಈ ಕೊಲೆಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ, ಕೇರಳ ಪೊಲೀಸರು ಕಾನೂನು ಪ್ರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯಿಂದ 2 ಕಿ.ಮೀ. ದೂರದಲ್ಲಿ ಕೊಲೆ ನಡೆದಿದೆ. ಪೊಲೀಸರು ಸಂಚಾರ ನಿರ್ಬಂಧ ಅಥವಾ ವಾಹನಗಳ ತಪಾಸಣೆ ನಡೆಸಿಲ್ಲ' ಎಂದು ಕಿಡಿಕಾರಿದ್ದಾರೆ.

ರಾಜ್ಯದಾದ್ಯಂತ, ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದ ಸಹಕಾರದಿಂದಲೇ ಪಿಎಫ್‌ಐ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದೂ ದೂರಿದ್ದಾರೆ.

'ಕೇರಳದಲ್ಲಿ ಪಿಎಫ್‌ಐ ಮತ್ತು ಸಿಪಿಐ–ಎಂ ರಹಸ್ಯ ಸಂಬಂಧ ಹೊಂದಿವೆ. ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟಾಗಿ ಆಡಳಿತ ನಡೆಸುತ್ತಿವೆ. ಕಾಂಗ್ರೆಸ್ ಮತ್ತು ಸಿಪಿಐ–ಎಂ ಎರಡೂ ಮಿತ್ರಪಕ್ಷಗಳು ಕೇರಳದಲ್ಲಿ ಮುಸ್ಲಿಂ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿವೆ. ಇದು ದೇಶಕ್ಕೇ ಗಂಭೀರವಾದ ಬೆದರಿಕೆಯಾಗಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಎಲ್ಲ ಕೊಲೆ ಪ್ರಕರಣಗಳನ್ನು ಕೇರಳ ಸರ್ಕಾರ ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುರುಳೀಧರನ್ ಅವರು, ಪ್ರಪಂಚದ ಯಾವುದೇ ಭಾಗದಲ್ಲಾದರೂ ನೀವು ಧಾರ್ಮಿಕ ಭಯೋತ್ಪಾದನೆ ಅಥವಾ ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ಮಾತನಾಡಬಹುದು. ಆದರೆ, ಕೇರಳದಲ್ಲಿ ಅದು ಸಾಧ್ಯವಿಲ್ಲ. ಸ್ವಘೋಷಿತ ಜಾತ್ಯತೀತ ವ್ಯಕ್ತಿಗಳು, ಹೋರಾಟಕ್ಕೆ ನಿಲ್ಲುತ್ತಾರೆ ಮತ್ತು ಸತ್ಯ ಹೇಳುವವರ ಮೇಲೆ ದಾಳಿ ನಡೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಇದು ಪಿಎಫ್‌ಐನಿಂದ ನಡೆದ ಮೊದಲ ಕೊಲೆ ಪ್ರಕರಣವೇನಲ್ಲ. ಸಿಪಿಐ–ಎಂ ಅಥವಾ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಾಂಗ್ರೆಸ್ ಕೂಡ ಅವರದೇ ಕಾರ್ಯಕರ್ತ ಹತ್ಯೆಯಾದಾಗಲೂ ತುಟಿ ಬಿಚ್ಚಲಿಲ್ಲ. ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT