ಶನಿವಾರ, ಮೇ 21, 2022
23 °C

ಕೇರಳದಲ್ಲಿ ಮತ್ತೆ ರಾಜಕೀಯ ಹತ್ಯೆ ಸರಣಿ: ಬಿಜೆಪಿ, ಎಸ್‌ಡಿಪಿಐ ಮುಖಂಡರು ಬಲಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಸೋಶಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಮತ್ತು ಬಿಜೆಪಿಯ ತಲಾ ಒಬ್ಬ ಮುಖಂಡರ ಹತ್ಯೆ ನಡೆದಿದೆ. 12 ಗಂಟೆಗಳ ಅಂತರದಲ್ಲಿ ನಡೆದಿರುವ ಈ ಹತ್ಯೆಗಳು ರಾಜಕೀಯ ಕಾರಣಕ್ಕೆ ನಡೆದಿವೆ ಎಂದು ಶಂಕಿಸಲಾಗಿದೆ.

ಹತ್ಯೆಗಳ ಬಳಿಕ ಜಿಲ್ಲೆಯಲ್ಲಿ ಪ್ರಕ್ಷುಬ್ಧ ಸ್ಥಿತಿ ಮನೆಮಾಡಿದೆ. 144ನೇ ಸೆಕ್ಷನ್‌ ಅಡಿ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಹೇರಲಾಗಿದೆ. ಈವರೆಗೆ ಸುಮಾರು 50 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್‌. ಶಾನ್‌ (36) ಅವರನ್ನು ಆಳಪ್ಪುಳ ಜಿಲ್ಲೆಯ ಮಣ್ಣಂಚೇರಿ ಎಂಬಲ್ಲಿ ಶನಿವಾರ ಸಂಜೆ ಹತ್ಯೆ ಮಾಡಲಾಗಿದೆ. ಅವರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರು. ಕಾರಿನಲ್ಲಿ ಬಂದ ಏಳು ಜನರು ಶಾನ್‌ ಅವರನ್ನು ಕೆಳಕ್ಕೆ ಬೀಳಿಸಿ, ಚೂರಿಯಿಂದ ಚುಚ್ಚಿದ್ದರು. ಅವರು ಶನಿವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ದೇಹದ ಮೇಲೆ 40ಕ್ಕೂ ಹೆಚ್ಚು ಇರಿತದ ಗಾಯಗಳಿದ್ದವು ಎನ್ನಲಾಗಿದೆ. 

ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿ  ರಂಜಿತ್‌ ಶ್ರೀನಿವಾಸ್‌ (45) ಅವರನ್ನು ಭಾನುವಾರ ಬೆಳಿಗ್ಗೆ ಹತ್ಯೆ ಮಾಡಲಾಗಿದೆ. ಆಲಪ್ಪುಳದ ಅವರ ಮನೆಗೆ ನುಗ್ಗಿದ ಗುಂಪೊಂದು ಅವರ ಮೇಲೆ ದಾಳಿ ನಡೆಸಿತು. ರಂಜಿತ್‌ ಅವರ ತಾಯಿ ಮತ್ತು ಪತ್ನಿ ಈ ದಾಳಿಗೆ ಪ್ರತ್ಯಕ್ಷ ಸಾಕ್ಷಿಗಳು. ಆರೋಪಿಗಳು ಎಸ್‌ಡಿಪಿಐ ಕಾರ್ಯಕರ್ತರು, ಅವರು ಎಸ್‌ಡಿಪಿಐ ಚಿಹ್ನೆ ಇದ್ದ ಆ್ಯಂಬುಲೆನ್ಸ್‌ನಲ್ಲಿ ಬಂದಿದ್ದರು ಎನ್ನಲಾಗಿದೆ.

10 ಕಿ.ಮೀ. ವ್ಯಾಪ್ತಿಯೊಳಗಿನ ಪ್ರದೇಶದಲ್ಲಿ ಈ ಎರಡೂ ಘಟನೆಗಳು ನಡೆದಿವೆ. ಹಾಗಾಗಿ ಇದು ರಾಜಕೀಯ ಪ್ರತೀಕಾರದ ಹತ್ಯೆ ಎಂಬ ಬಲವಾದ ಶಂಕೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್‌ ತಂಡವನ್ನು ರಚಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ. 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಈ ಹತ್ಯೆಗಳನ್ನು ಖಂಡಿಸಿದ್ದಾರೆ. ‘ಈ ಹತ್ಯೆಗಳ ಹಿಂದಿರುವ ಅಪರಾಧಿಗಳನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಈ ರೀತಿಯ ಅಮಾನವೀಯ ಕೃತ್ಯಗಳು ದೇಶಕ್ಕೆ ಮಾರಕ. ಇಂಥ ಸಂಘಟನೆಗಳು ಮತ್ತು ಅವರ ದ್ವೇಷಪೂರ್ಣ ಚಟುವಟಿಕೆಗಳನ್ನು ಜನರು ದೂರ ಇಡಬೇಕು’ ಎಂದಿದ್ದಾರೆ. 

ರಂಜಿತ್‌ ಅವರ ಕೊಲೆಯನ್ನು ನಾಚಿಗೇಡಿನ ಕೃತ್ಯ ಎಂದು ಕರೆದಿರುವ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್‌, ‘ಎಸ್‌ಡಿಪಿಐ ನಾಯಕನ ಹತ್ಯೆ ನಡೆದ ಕೂಡಲೇ ಪೊಲೀಸರು ಸರಿಯಾದ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಕೈ ಮೀರುತ್ತಿರಲಿಲ್ಲ. ಎಸ್‌ಡಿಪಿಐ ನಾಯಕನ ಹತ್ಯೆ ಬಳಿಕ ರಾಜ್ಯ ಸರ್ಕಾರ ಮತ್ತು ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದೇ ರಂಜಿತ್‌ ಹತ್ಯೆಗೆ ಕಾರಣ’ ಎಂದಿದ್ದಾರೆ. 

ಹತ್ಯೆಗಳಿಗೆ ಸಂಬಂಧಿಸಿದಂತೆ ಎಸ್‌ಡಿಪಿಐ ಮತ್ತು ಆರ್‌ಎಸ್‌ಎಸ್ ನಾಯಕರು ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು