ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಪತಿ ಆದೇಶವಿದ್ದರೂ ಮಾತನಾಡಲು ಅವಕಾಶ ಕೊಡುತ್ತಿಲ್ಲ: ಖರ್ಗೆ ಅಸಮಾಧಾನ

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ
Last Updated 16 ಡಿಸೆಂಬರ್ 2022, 13:42 IST
ಅಕ್ಷರ ಗಾತ್ರ

ನವದೆಹಲಿ: ‘ಸದನದ ನಾಯಕ, ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಪ್ರಧಾನಮಂತ್ರಿಯವರು ಸದನದಲ್ಲಿ ಯಾವಾಗ ಬೇಕಾದರೂ ಮಾತನಾಡಬಹುದು ಎಂದು ಸಭಾಪತಿ ಜಗದೀಪ್‌ ಧನಕರ್‌ ಅವರು ಆದೇಶ ನೀಡಿದ್ದರೂ ಕೂಡ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ’ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರತಿಭಟನೆಯನ್ನೂ ದಾಖಲಿಸಿದ್ದಾರೆ.

ಶುಕ್ರವಾರ ಸದನದ ಕಲಾಪ ಆರಂಭವಾಗುತ್ತಿದ್ದಂತೆ ಅವರು ಅರುಣಾಚಲ ಪ್ರದೇಶದ ಗಡಿಯಲ್ಲಿ ನಡೆದಿರುವ ಭಾರತ–ಚೀನಾ ಸೇನಾ ಸಂಘರ್ಷದ ಕುರಿತ ಮಾತನಾಡಲು ಅವಕಾಶ ನೀಡುವಂತೆ ಕೋರಿದರು. ಉಪ ಸಭಾಪತಿ ಹರಿವಂಶ್‌ ಅವರು ಅವಕಾಶ ನಿರಾಕರಿಸಿದರು.

‘ಸದನದಲ್ಲಿ ಯಾವಾಗ ಬೇಕಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ಸಭಾಪತಿಯವರು ತಿಳಿಸಿದ್ದರು. ಅದನ್ನು ನಮಗೆ ನೀಡಿರುವ ಭರವಸೆ ಎಂದು ಭಾವಿಸಿದ್ದೆ. ಅದು ಇಡೀ ಸದನಕ್ಕೆ ನೀಡಿದ ಸೂಚನೆ ಎಂದೂ ತಿಳಿದುಕೊಂಡಿದ್ದೆ. ಹೀಗಿರುವಾಗ ರಕ್ಷಣಾ ಸಚಿವರು ಭಾರತ–ಚೀನಾ ಗಡಿ ಸಂಘರ್ಷದ ಕುರಿತು ಸದನದಲ್ಲಿ ಹೇಳಿಕೆ ನೀಡುವಾಗ ಮಧ್ಯಪ್ರವೇಶಿಸಲು ನನಗೆ ಅವಕಾಶ ನಿರಾಕರಿಸಿದ್ದು ಏಕೆ?’ ಎಂದು ಪ್ರಶ್ನಿಸಿದರು.

‘ಭಾರತ–ಚೀನಾ ಗಡಿ ಸಂಘರ್ಷವು ದೇಶಕ್ಕೆ ಹಾಗೂ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರ. ಈ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳ ಸಂಸದರು ಕೆಲ ದಿನಗಳಿಂದ ಮನವಿ ಮಾಡುತ್ತಲೇ ಇದ್ದಾರೆ. ವಿರೋಧ ಪಕ್ಷದ ನಾಯಕನಾಗಿರುವ ನಾನು ಅವರೊಂದಿಗೆ ಕೈಜೋಡಿಸಬೇಕು. ಅದು ನನ್ನ ಜವಾಬ್ದಾರಿ’ ಎಂದರು.

‘ಉಪ ಸಭಾಪತಿಯವರೆ ಈ ವಿಚಾರದ ಕುರಿತು ವಿಷಾದ ವ್ಯಕ್ತಪಡಿಸಿ. ಇಲ್ಲವೇ ಮಾತನಾಡಲು ಅವಕಾಶ ನೀಡುವ ಅಧಿಕಾರ ತಮಗೆ ಇಲ್ಲವೆಂದಾದರೂ ತಿಳಿಸಿ’ ಎಂದು ಖರ್ಗೆ ಅವರು ಹರಿವಂಶ್‌ ಅವರಿಗೆ ಹೇಳಿದರು.

‘ನಾನು ಕಡತಗಳನ್ನೆಲ್ಲಾ ಪರಿಶೀಲಿಸಿ ಬಳಿಕ ಸದನಕ್ಕೆ ಮಾಹಿತಿ ನೀಡುತ್ತೇನೆ‍. ಸಭಾಪತಿಯವರ ಮಾತನ್ನು ಗಮನದಲ್ಲಿಟ್ಟುಕೊಂಡಿದ್ದು, ಖರ್ಗೆ ಅವರಿಗೆ ಸಾಕಷ್ಟು ಬಾರಿ ಮಾತನಾಡಲು ಅವಕಾಶ ನೀಡಿದ್ದೇನೆ’ ಎಂದು ಉಪ ಸಭಾಪತಿ ತಿಳಿಸಿದರು.

ಮತ್ತೆ ಕಲಾಪಕ್ಕೆ ಅಡ್ಡಿ:ಭಾರತ–ಚೀನಾ ಗಡಿ ಸಂಘರ್ಷದ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಶುಕ್ರವಾರವೂ ಪಟ್ಟು ಹಿಡಿದ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದರು.

ನಿಯಮ 267ರ ಅಡಿಯಲ್ಲಿ ತಾವು ನೀಡಿರುವ ನೋಟಿಸ್‌ ಅನ್ನು ಪರಿಗಣಿಸಬೇಕು ಎಂದು ಕಾಂಗ್ರೆಸ್‌ ಸಂಸದರು ಒತ್ತಾಯಿಸಿದರು. ಉಪ ಸಭಾಪತಿಯವರು ಇದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಕೆರಳಿದ ಸದಸ್ಯರು ಘೋಷಣೆಗಳನ್ನು ಕೂಗಿದರು. ಗದ್ದಲ ಏರ್ಪಟ್ಟಿದ್ದರಿಂದ ಹರಿವಂಶ್‌ ಅವರು ಕಲಾಪವನ್ನು 25 ನಿಮಿಷ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT