ಶ್ರೀನಗರ : ಇತ್ತೀಚೆಗೆ ಕಾಶ್ಮೀರಿ ಪಂಡಿತನೊಬ್ಬರನ್ನು ಹತ್ಯೆ ಮಾಡಿದ್ದ ಇಬ್ಬರು ಉಗ್ರರನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮಸೀದಿಯೊಂದರಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್ ಮಾಡಿವೆ. ಕಾರ್ಯಾಚರಣೆ ವೇಳೆ ಓರ್ವ ಸೇನಾ ಯೋಧ ಕೂಡ ಮೃತಪಟ್ಟಿದ್ದಾರೆ.
ಕನಿಷ್ಠ ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರು ಮಸೀದಿಯೊಳಗೆ ಅಡಗಿಕೊಂಡಿದ್ದಾರೆ ಎಂಬ ಸುಳಿವಿನ ಮೇರೆಗೆ ಪಡಗಂಪುರ ಗ್ರಾಮವನ್ನು ಸುತ್ತುವರಿದ ಭದ್ರತಾ ಪಡೆಗಳು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಸ್ಥಳೀಯ ಉಗ್ರಗಾಮಿಗಳು ಮಸೀದಿಯೊಳಗೆ ಅಡಗಿ ಕುಳಿತಿದ್ದರು. ಮಸೀದಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ನಾವು ನಿರ್ಧರಿಸಿದ್ದೆವು. ತೀವ್ರ ಸಂಯಮದೊಂದಿಗೆ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎನ್‌ಕೌಂಟರ್ ಸಮಯದಲ್ಲಿ, ಸೈನಿಕರೊಬ್ಬರ ತೊಡೆಗೆ ಗುಂಡು ತಗುಲಿದೆ. ಭಾರೀ ಪ್ರಮಾಣದ ರಕ್ತ ಸ್ರಾವದಿಂದಾಗಿ ಅವರು ಮೃತಪಟ್ಟರು ಎಂದು ಅಧಿಕಾರಿ ತಿಳಿಸಿದ್ದಾರೆ.
ಹತ್ಯೆಗೊಂಡವರಲ್ಲಿ ಓರ್ವನನ್ನು ಅಕಿಬ್ ಮುಸ್ತಾಕ್ ಭಟ್ ಎಂದು ಗುರುತಿಸಲಾಗಿದ್ದು, ಈತನನ್ನು ಮಸೀದಿ ಆವರಣದಲ್ಲಿಯೇ ಹತ್ಯೆ ಮಾಡಲಾಗಿದೆ. ಮತ್ತೊಬ್ಬನನ್ನು ಪುಲ್ವಾಮಾ ಬಳಿಯ ಟ್ರಾಲ್ ನಿವಾಸಿ ಅಜಾಜ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಈತ ಮಸೀದಿ ಸಮೀಪದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ. ತಾಂತ್ರಿಕ ಕಣ್ಗಾವಲಿನ ಮೂಲಕ ಈತನ ಸ್ಥಳವನ್ನು ಪತ್ತೆಹಚ್ಚಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದರು.
ಈ ಇಬ್ಬರು ಭಯೋತ್ಪಾದಕರು ಭಾನುವಾರ ಪುಲ್ವಾಮದಲ್ಲಿ ಬ್ಯಾಂಕಿನ ಭದ್ರತಾ ಸಿಬ್ಬಂದಿಶ ಸಂಜಯ್ ಶರ್ಮಾ ಅವರು ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.