ಶನಿವಾರ, ಮಾರ್ಚ್ 25, 2023
28 °C

ನಿಯಮ ಮೀರಿ ನೀರಾವರಿ ಯೋಜನೆ ಜಾರಿ: ತೆಲಂಗಾಣ ವಿರುದ್ಧ ಆಂಧ್ರ ಸಿ.ಎಂ.ದೂರು

ಪಿಟಿಐ Updated:

ಅಕ್ಷರ ಗಾತ್ರ : | |

ಅಮರಾವತಿ: ‘ಕೃಷ್ಣಾ ನದಿ ನಿರ್ವಹಣಾ ಮಂಡಳಿಯು ಪಕ್ಷಪಾತ ಧೋರಣೆ ತಳೆದಿದ್ದು, ತೆಲಂಗಾಣ ರಾಜ್ಯದ ಪರವಾಗಿದೆ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್‌ ರೆಡ್ಡಿ ಆರೋಪಿಸಿದ್ದಾರೆ.

‘ಅಲ್ಲದೆ, ತೆಲಂಗಾಣ ಸರ್ಕಾರವು ‘ಆಂಧ್ರಪ್ರದೇಶ ಪುನರ್ವಿಂಗಡಣಾ ಕಾಯ್ದೆ 2014‘ಯ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ವಿಚಿತ್ರವಾಗಿ ವರ್ತಿಸುತ್ತಿದೆ. ಇದರಿಂದ ಆಂಧ್ರಕ್ಕೆ ತೊಂದರೆಯಾಗಿದೆ‘ ಎಂದು ಟೀಕಿಸಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವರಿಗೆ ನಾಲ್ಕು ಪುಟಗಳ ಪತ್ರ ಬರೆದಿರುವ ಅವರು, ’ಜಲವಿದ್ಯುತ್ ಯೋಜನೆಗಾಗಿ ಮನಸೋಇಚ್ಛೆ ನೀರು ಪಡೆಯುವ ಕ್ರಮವನ್ನು ನಿಲ್ಲಿಸಲು ತೆಲಂಗಾಣಕ್ಕೆ ಸೂಚಿಸಬೇಕು’ ಎಂದು ಕೋರಿದ್ದಾರೆ.

ಆಂಧ್ರಪ್ರದೇಶದ ನೀರಿನ ಹಕ್ಕು ಕಸಿದುಕೊಳ್ಳುವ ಏಕಮಾತ್ರ ಉದ್ದೇಶದಿಂದ ನಿಯಮ ಉಲ್ಲಂಘಿಸುವ ತೆಲಂಗಾಣ ಸರ್ಕಾರದ ಧೋರಣೆ ಬಗ್ಗೆ ಈಗಾಗಲೇ ಜಲಶಕ್ತಿ ಸಚಿವಾಲಯಕ್ಕೆ ಹಲವು ಬಾರಿ ದೂರು ನೀಡಿದ್ದೇವೆ ಎಂದಿದ್ದಾರೆ.

ಕೃಷ್ಣಾ ನದಿಪಾತ್ರದಲ್ಲಿ ತೆಲಂಗಾಣದಲ್ಲಿ ಅನಧಿಕೃತವಾಗಿ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂಬುದನ್ನು ಜಲಶಕ್ತಿ ಸಚಿವಾಲಯದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಜಲ ಆಯೋಗದ ಪರಿಶೀಲನೆಗೆ ಒಳಪಡದೇ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬಾರದು ಎಂದು ನಿರ್ದೇಶನ ನೀಡಲು ಹಲವು ಬಾರಿ ದೂರು ಸಲ್ಲಿಸಿದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮುಖ್ಯಮಂತ್ರಿ ಅವರು ಪತ್ರದಲ್ಲಿ ವಿಷಾದಿಸಿದ್ದಾರೆ.

ಉಭಯ ರಾಜ್ಯಗಳ ನಡುವಣ ಸಾಮಾನ್ಯ ಜಲಾಶಯದ ಬಳಿ ಪರಿಣಾಮಕಾರಿ ನಿರ್ವಹಣೆಗಾಗಿ ಸಿಐಎಸ್‌ಎಫ್‌ ತುಕಡಿಗಳನ್ನು ನಿಯೋಜನೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು