ಬುಧವಾರ, ಮಾರ್ಚ್ 3, 2021
18 °C
ಲಡಾಖ್‌ ಗಡಿಯಲ್ಲಿನ ಸಂಘರ್ಷಮಯ ಸ್ಥಿತಿ ಶಮನ ಯತ್ನ

ಗಡಿ ಬಿಕ್ಕಟ್ಟು: ಭಾರತ–ಚೀನಾ ನಡುವೆ 9ನೇ ಸುತ್ತಿನ ಮಾತುಕತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೂರ್ವ ಲಡಾಖ್‌ ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷಮಯ ಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಸೇನೆಗಳ ಕಮಾಂಡರ್‌ ಮಟ್ಟದ 9ನೇ ಸುತ್ತಿನ ಮಾತುಕತೆ ಭಾನುವಾರ ನಡೆಯಿತು.

ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ ಸಂದರ್ಭದಲ್ಲಿ ವಿದೇಶಾಂಗ ಸಚಿವರಾದ ಎಸ್‌.ಜೈಶಂಕರ್ ಹಾಗೂ ವಾಂಗ್‌ ಯಿ ನಡುವೆ ಮಾಸ್ಕೋದಲ್ಲಿ ಸೆ.10ರಂದು ಮಾತುಕತೆ ನಡೆದಿತ್ತು. ಗಡಿಯಿಂದ ಸೈನಿಕರನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಐದು ಅಂಶಗಳನ್ನು ಒಳಗೊಂಡ ಒಪ್ಪಂದವಾಗಿತ್ತು.

ಭಾನುವಾರ ನಡೆದ ಮಾತುಕತೆ ಈ ಒಪ್ಪಂದ ಕೇಂದ್ರೀಕೃತವಾಗಿತ್ತು ಎಂದು ಸೇನಾಪಡೆ ಅಧಿಕಾರಿಗಳು ತಿಳಿಸಿದರು.

ವಾಸ್ತವ ನಿಯಂತ್ರಣ ರೇಖೆಗೆ (ಎಲ್‌ಎಸಿ) ಹೊಂದಿಕೊಂಡಿರುವ ಚೀನಾಕ್ಕೆ ಸೇರಿದ ಮೊಲ್ಡೊ ಗಡಿ ಠಾಣೆಯಲ್ಲಿ ಈ ಉನ್ನತ ಮಟ್ಟದ ಸಭೆ ನಡೆಯಿತು. ಲೇಹ್‌ನಲ್ಲಿನ 14 ಕಾರ್ಪ್ಸ್‌ನ ಕಮಾಂಡರ್‌ ಲೆ.ಜನರಲ್‌ ಪಿ.ಜಿ.ಕೆ.ಮೆನನ್‌ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು.

ಸೈನಿಕರನ್ನು ಹಿಂಪಡೆಯುವ ಮೂಲಕ ಗಡಿಯಲ್ಲಿನ ಸಂಘರ್ಷಮಯ ಸ್ಥಿತಿಯನ್ನು ಶಮನಗೊಳಿಸುವ ಜವಾಬ್ಧಾರಿ ಚೀನಾ ಸೇನೆಯದು ಎಂಬುದನ್ನು ಭಾರತ ಮತ್ತೊಮ್ಮೆ ಪ್ರತಿಪಾದಿಸಿತು ಎಂದು ಅಧಿಕಾರಿಗಳು ತಿಳಿಸಿದರು.

ಗಡಿ ವಿಷಯವಾಗಿ ಸಂಘರ್ಷದಿಂದ ಕೂಡಿದ ಪರಿಸ್ಥಿತಿ ನಿರ್ಮಾಣವಾದಾಗಿನಿಂದ ಈ ವರೆಗೆ 8 ಸುತ್ತಿನ ಮಾತುಕತೆ ನಡೆದಿವೆ. 8ನೇ ಸುತ್ತಿನ ಮಾತುಕತೆ ಕಳೆದ ವರ್ಷ ನವೆಂಬರ್‌ 6ರಂದು ನಡೆದಿತ್ತು.

7ನೇ ಸುತ್ತಿನ ಮಾತುಕತೆ ಕಳೆದ ವರ್ಷ ಅಕ್ಟೋಬರ್‌ 12ರಂದು ನಡೆದಿತ್ತು. ಪಾಂಗಾಂಗ್‌ ಸರೋವರದ ದಕ್ಷಿಣ ತೀರದಿಂದ ಭಾರತದ ಸೈನಿಕರು ಕೂಡಲೇ ಹಿಂದೆ ಸರಿಯಬೇಕು ಎಂದು ಚೀನಾ ಅಂದಿನ ಮಾತುಕತೆ ವೇಳೆ ಒತ್ತಾಯಿಸಿತ್ತು.

ಈ ಮಾತಿಗೆ ಸೊಪ್ಪು ಹಾಕದ ಭಾರತ, ಪಾಂಗಾಂಗ್ ಸರೋವರ ತೀರ ಸೇರಿದಂತೆ ಸಂಘರ್ಷಕ್ಕೆ ಕಾರಣವಾಗಿರುವ ಸ್ಥಳಗಳಿಂದ ಸೈನಿಕರನ್ನು ಹಿಂಪಡೆಯುವ ಪ್ರಕ್ರಿಯೆ ಎರಡೂ ದೇಶಗಳಿಂದ ಏಕಕಾಲಕ್ಕೆ ನಡೆಯಬೇಕು ಎಂದೂ ಸ್ಪಷ್ಟಪಡಿಸಿತ್ತು.

ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಗಡಿಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಶಮನವಾಗದ ಕಾರಣ, ಭಾರತ 50,000 ಸೈನಿಕರನ್ನು ಗಡಿಯ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿ, ಯುದ್ಧಸನ್ನದ್ಧತೆಯ ಸಂದೇಶ ರವಾನಿಸಿದೆ.

ಚೀನಾ ಸಹ ಅಷ್ಟೇ ಸಂಖ್ಯೆಯ ಸೈನಿಕರನ್ನು ತನ್ನ ಗಡಿಯೊಳಗೆ ನಿಯೋಜನೆ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು