ಶನಿವಾರ, ಮಾರ್ಚ್ 25, 2023
22 °C
‘ಸುಪ್ರೀಂ’ ಸಲಹೆ

ಲಖಿಂಪುರ ಖೇರಿ: ತನಿಖೆಗೆ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಉಸ್ತುವಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಖಿಂಪುರ–ಖೇರಿ ಹಿಂಸಾಕೃತ್ಯ ಪ್ರಕರಣದ ತನಿಖೆ ಪ್ರಗತಿಯು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಯೊಬ್ಬರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದೂ ಸಲಹೆ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು, ಶುಕ್ರವಾರದೊಳಗೆ ಈ ಬಗ್ಗೆ ಪ್ರತಿಕ್ರಿಯಿಸಲು ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಹರೀಶ್‌ ಸಾಳ್ವೆ ಮತ್ತು ಗರಿಮಾ ಪ್ರಸಾದ್ ಅವರಿಗೆ ಸೂಚಿಸಿತು.

ತನಿಖೆಯ ಉಸ್ತುವಾರಿ ಹೊಣೆಯನ್ನು ವಹಿಸಲು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ರಾಕೇಶ್ ಕುಮಾರ್ ಜೈನ್‌ ಅಥವಾ ರಂಜಿತ್‌ ಸಿಂಗ್ ಅವರ ಹೆಸರನ್ನೂ ಪೀಠವು ಸೂಚಿಸಿತು.

ಪ್ರಕರಣದ ಆರೋಪಪಟ್ಟಿ ದಾಖಲಿಸುವವರಿಗೆ ವಿಶ್ರಾಂತ ನ್ಯಾಯಮೂರ್ತಿಗೆ ಉಸ್ತುವಾರಿ ಹೊಣೆ ಒಪ್ಪಿಸಬಹುದು ಎಂದು ಹೇಳಿತು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರು ಪೀಠದ ಇತರ ಸದಸ್ಯರಾಗಿದ್ದಾರೆ. 

‘ತನಿಖೆಯ ಪ್ರಗತಿ ಈಗ ನಿರೀಕ್ಷಿತ ಮಟ್ಟದಲ್ಲಿಲ್ಲ’ ಎಂದು ಹೇಳಿದ ಪೀಠವು, ವಿಡಿಯೊ ದಾಖಲೆಗೆ ಸಂಬಂಧಿಸಿದ ಪ್ರಯೋಗಾಲಯದ ವರದಿಯನ್ನು ಪಡೆಯುವಲ್ಲಿಯೂ ವಿಳಂಬ ಮಾಡಲಾಗುತ್ತಿದೆ ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸಿತು.

ಈ ಹಿಂದೆ ಪೀಠವು 2018ರ ಸಾಕ್ಷಿಗಳ ರಕ್ಷಣೆ ಯೋಜನೆಯಡಿ ಪ್ರಕರಣದ ಸಾಕ್ಷಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಉತ್ತರ ಪ್ರದೇಶದ ಲಖಿಂಪುರದಲ್ಲಿ ಅಕ್ಟೋಬರ್‌ 3ರಂದು ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಜನರು ಮೃತಪಟ್ಟಿದ್ದರು. ಘಟನೆ ಕುರಿತು ಉತ್ತರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. 

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿ ವಿರೋಧಿಸಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿದ್ದು, ನಾಲ್ವರು ರೈತರು ಮೃತಪಟ್ಟಿದ್ದರು. ರೋಷತಪ್ತ ರೈತರು ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ವಾಹನ ಚಾಲಕನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದರು. ಸ್ಥಳೀಯ ಪತ್ರಕರ್ತರೊಬ್ಬರು ಹಿಂಸಾಚಾರದಲ್ಲಿ ಮೃತಪಟ್ಟಿದ್ದರು.

ಘಟನೆ ಕುರಿತು ಪೊಲೀಸರು ಇದುವರೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ರೈತರ ಮೇಲೆ ಹರಿಸಲಾದ ವಾಹನದಲ್ಲಿ ಆಶಿಶ್‌ ಮಿಶ್ರಾ ಅವರು ಇದ್ದರು ಎಂದು ರೈತ ಮುಖಂಡರು ಹೇಳಿದ್ದರು. ಆದರೆ, ಸಚಿವರು ಇದನ್ನು ತಳ್ಳಿಹಾಕಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು