ಗುರುವಾರ , ಮೇ 13, 2021
18 °C
ಪ್ರಜಾವಾಣಿ ಸಂವಾದ

ಪ್ರಾದೇಶಿಕ ಪಕ್ಷಗಳು V/s ರಾಷ್ಟ್ರೀಯ ಪಕ್ಷಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೇಶದಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷಗಳು ಮತ್ತೆ ದೇಶದ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬರುವ ಅವಕಾಶ ಇದೆಯೆ? ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ಫೇಸ್‌ ಬುಕ್‌ ಲೈವ್‌ ಸಂವಾದದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಮುಖಂಡರು ಮಂಡಿಸಿದ ವಿಚಾರಗಳು ಇಲ್ಲಿವೆ..

ರಾಷ್ಟ್ರೀಯ ಪಕ್ಷಗಳ ಅಂತ್ಯದ ಸೂಚನೆಯಲ್ಲ

70 ವರ್ಷಗಳಲ್ಲಿ ಬೇರೆ ಬೇರೆ ರೀತಿಯ ಪ್ರಯೋಗಗಳು ನಡೆದಿವೆ. ಕಾಂಗ್ರೆಸ್‌ನಿಂದ ಸಿಡಿದು ಹೋದವರು ಪ್ರಾದೇಶಿಕ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ ವಿರುದ್ಧ ಇದ್ದವರೂ ಪ್ರಾದೇಶಿಕ ಪಕ್ಷದವರಾಗಿದ್ದಾರೆ. ಒಡಿಶಾ, ತಮಿಳುನಾಡು, ತೆಲಂಗಾಣ, ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಹಿಡಿತ ಈಗಲೂ ಬಲವಾಗಿ ಇದೆ. ರಾಷ್ಟ್ರೀಯ ಪಕ್ಷಗಳು ದುರ್ಬಲವಾದ ಎಲ್ಲ ಸಂದರ್ಭದಲ್ಲೂ ಪ್ರಾದೇಶಿಕ ಪಕ್ಷಗಳು ಬಲಗೊಳ್ಳುತ್ತವೆ.

ಕಾಂಗ್ರೆಸ್‌ ಯಾವತ್ತೂ ಪ್ರಾದೇಶಿಕ ಪಕ್ಷಗಳನ್ನು ವಿರೋಧಿಸಿಲ್ಲ. ಕಾಂಗ್ರೆಸ್‌ ಒಂದು ರಾಷ್ಟ್ರೀಯ ಪಕ್ಷ. ಆದರೂ, ರಾಜ್ಯಗಳಲ್ಲಿ ಬಲವಾದ ನಾಯಕತ್ವ ಇದ್ದಾಗ, ಪ್ರಾದೇಶಿಕ ಭಾವನೆಗಳಿಗೆ ಸ್ಪಂದಿಸಿದಾಗಲೆಲ್ಲ ನಮ್ಮ ಪಕ್ಷ ಗೆದ್ದು ಬಂದಿದೆ. ಪ್ರಾದೇಶಿಕ ಪಕ್ಷಗಳ ಜತೆಗೆ ಕಾಂಗ್ರೆಸ್‌ ಪಕ್ಷವು ಉತ್ತಮ ಬಾಂಧವ್ಯ ಹೊಂದಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಮೊದಲ ಬಾರಿಗೆ ಇಂತಹ ಸ್ಥಿತಿ ಎದುರಾಗಿಲ್ಲ. ಬಿಜೆಪಿಯ ಕಾರ್ಯಸೂಚಿ ಮತ್ತು ಸಿದ್ಧಾಂತವನ್ನು ಬಹಿರಂಗಪಡಿಸಿ, ಅವರ ವಿರುದ್ಧ ನಿಲ್ಲಬೇಕು ಎಂಬ ವಿಚಾರದಲ್ಲಿ ಕಾಂಗ್ರೆಸ್‌ ನಾಯಕತ್ವ ಸ್ಪಷ್ಟತೆ ಹೊಂದಿದೆ. ಬಲಪಂಥೀಯವಾದದ ಕಡೆಗೆ ಒಮ್ಮೆ ಮತದಾರರು ತಿರುಗಿ, ನಂತರದಲ್ಲಿ ಬದಲಾವಣೆಯಾಗುವುದು ಎಲ್ಲ ಕಡೆಗೂ ನಡೆದಿದೆ. ನಮ್ಮ ದೇಶದಲ್ಲೂ ಅದೇ ಆಗುತ್ತಿದೆ. ಹುಸಿ ರಾಷ್ಟ್ರೀಯವಾದವನ್ನು ಮುಂದಿಟ್ಟುಕೊಂಡು ಬಿಜೆಪಿ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ.

ಪ್ರಬಲವಾದ ಪ್ರಾದೇಶಿಕ ಪಕ್ಷಗಳು ಹಾಗೂ ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಬಲವಾದ ಪ್ರಾದೇಶಿಕ ನಾಯಕತ್ವ ಎರಡೂ ಒಂದೇ ಕೆಲಸ ಮಾಡುತ್ತವೆ. ಕ್ಯಾಪ್ಟನ್‌ ಅಮರೀಂದರ್ ಸಿಂಗ್‌, ಸಿದ್ದರಾಮಯ್ಯ, ಅಶೋಕ್ ಗೆಹ್ಲೋಟ್‌ ಎಲ್ಲರೂ ಪ್ರಬಲ ಪ್ರಾದೇಶಿಕ ನಾಯಕರು. ಅವರಿಗೆ ಬೆಂಬಲ ನೀಡಿದಾಗ ಪಕ್ಷ ಉತ್ತಮವಾಗಿ ಬೆಳೆದಿದೆ. ಆ ರೀತಿಯ ಪ್ರಬಲ ಪ್ರಾದೇಶಿಕ ನಾಯಕರು ದುರ್ಬಲಗೊಂಡಾಗ ಪಕ್ಷಕ್ಕೆ ಹಿನ್ನಡೆ ಆಗಿರುವುದೂ ನಡೆದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸೀಟುಗಳು ಸಿಕ್ಕಿರುವುದು ಕೇವಲ ರಾಷ್ಟ್ರೀಯತೆಯ ವಿಚಾರದಲ್ಲಿ ಅಲ್ಲ. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಮೊದಲು ಇದ್ದವು. ಈಗಲೂ ಇವೆ, ಮುಂದೆಯೂ ಇರುತ್ತವೆ.

ಡಾ. ಸೈಯದ್‌ ನಾಸೀರ್‌ ಹುಸೇನ್, ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌

 

ರಾಷ್ಟ್ರೀಯ ಪಕ್ಷಗಳ ಕಾಲ ಮುಗಿದಿಲ್ಲ

ಪ್ರಾದೇಶಿಕತೆ ಎಂಬುದು ಒಂದೊಂದು ಪ್ರದೇಶಕ್ಕೂ ಭಿನ್ನವಾದುದು. ಜಾತಿ, ಮತ, ಪ್ರಾಂತ, ಭಾಷೆ ಸೇರಿದಂತೆ ಅನೇಕ ವಿಚಾರಗಳ ಆಧಾರದಲ್ಲಿ ಪ್ರಾದೇಶಿಕ ಅಸ್ಮಿತೆ ಕೆಲಸ ಮಾಡುತ್ತದೆ. ಇನ್ನು ರಾಷ್ಟ್ರೀಯ ಪಕ್ಷಗಳಿಗೆ ಸ್ಥಳಾವಕಾಶ ಇಲ್ಲ ಎಂಬ ವಾದವನ್ನು ಒಪ್ಪಲಾಗದು. ಜನರು ಒಂದೊಂದು ಚುನಾವಣೆಯಲ್ಲಿ ಒಂದೊಂದು ರೀತಿಯಲ್ಲಿ ನಿರ್ಧಾರ ಮಾಡುತ್ತಾರೆ.

ಒಡಿಶಾದಲ್ಲಿ ಪ್ರಾದೇಶಿಕತೆಯ ಅಸ್ಮಿತೆಯನ್ನೇ ಮುಂದಿಟ್ಟುಕೊಂಡು ಒಂದು ಪ್ರಾದೇಶಿಕ ಪಕ್ಷ ಆಡಳಿತ ನಡೆಸುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಪ್ರಾದೇಶಿಕ ಅಸ್ಮಿತೆಯೇ ರಾಜಕಾರಣವನ್ನು ಮುನ್ನಡೆಸುತ್ತಿದೆ. ಎಲ್ಲ ಕಡೆಯೂ ಪ್ರಾದೇಶಿಕತೆ ಭಿನ್ನವಾಗಿರುತ್ತದೆ. ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳುವ ರಾಜಕೀಯ ಪಕ್ಷಗಳು ಪ್ರಾದೇಶಿಕ ಭಾವನೆಗಳಿಗೆ ಬೆಲೆ ಕೊಡದೇ ಇದ್ದಾಗ ಸಹಜವಾಗಿಯೇ ಪ್ರಾದೇಶಿಕ ಪಕ್ಷಗಳು ಬಲಗೊಳ್ಳುತ್ತವೆ.

ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಏನನ್ನೂ ಕಳೆದುಕೊಂಡಿಲ್ಲ. ನಮ್ಮ ನಿರೀಕ್ಷೆಯಂತೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಸತ್ಯ. ಆದರೆ, ಕೇರಳ, ತಮಿಳುನಾಡಿನಲ್ಲಿ ಮತ ಗಳಿಕೆ ಹೆಚ್ಚಿದೆ. ಯಾವ ದೃಷ್ಟಿಕೋನದಿಂದಲೂ ಹಿನ್ನಡೆ ಅಲ್ಲ.

ಪ್ರತಿ ಪ್ರಾದೇಶಿಕ ಪಕ್ಷಕ್ಕೂ ಒಂದು ರಾಷ್ಟ್ರೀಯ ಅಸ್ಮಿತೆ ಇರುತ್ತದೆ. ಪ್ರಾದೇಶಿಕ ಪಕ್ಷಗಳು ಒಕ್ಕೂಟವಾಗಿ ಅಧಿಕಾರಕ್ಕೆ ಬಂದರೂ ಬೇಗ ಕುಸಿದುಬಿದ್ದ ಉದಾಹರಣೆಗಳಿವೆ. ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಕೌಟುಂಬಿಕ ರಾಜಕೀಯ ಪಕ್ಷಗಳಾಗಿ ಉಳಿದಿವೆ. ರಾಷ್ಟ್ರೀಯ ಪಕ್ಷಗಳು ಗಟ್ಟಿಯಾಗಿದ್ದರೆ ಮಾತ್ರ ಅಂತರ ರಾಜ್ಯ ವಿವಾದಗಳನ್ನು ಸುಲಭವಾಗಿ ಪರಿಹರಿಸಬಹುದು.

ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ನಾಯಕತ್ವವನ್ನು ದುರ್ಬಲಗೊಳಿಸುತ್ತವೆ ಎಂಬ ಆರೋಪದಲ್ಲಿ ಹುರುಳಿಲ್ಲ. ಬಿ.ಎಸ್‌. ಯಡಿಯೂರಪ್ಪ ಬಿಜೆಪಿ ಬಿಟ್ಟು ಬೇರೆ ಪಕ್ಷ ಕಟ್ಟಿ ಬಿಜೆಪಿಯನ್ನು ಸೋಲಿಸಿದರು. ಆದರೂ, ಅವರನ್ನು ಕರೆತಂದು ಮುಖ್ಯಮಂತ್ರಿ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಪ್ರಾದೇಶಿಕ ಪಕ್ಷ ಮತ್ತು ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಪಕ್ಷಗಳು ಇರಬೇಕೆಂಬ ಚರ್ಚೆ ನಡೆಯುತ್ತಿದೆ. ಅದನ್ನು ಒಪ್ಪುವುದಿಲ್ಲ. ಎಲ್ಲ ಪಕ್ಷಗಳೂ ರಾಷ್ಟ್ರೀಯ ಪಕ್ಷಗಳೇ. ಆದರೆ, ಕೆಲವು ಪಕ್ಷಗಳ ಕಾರ್ಯವ್ಯಾಪ್ತಿ ಸೀಮಿತವಾಗಿರುತ್ತದೆ.

ಗಣೇಶ್‌ ಕಾರ್ಣಿಕ್‌, ಬಿಜೆಪಿ ರಾಜ್ಯ ಘಟಕದ ಮುಖ್ಯ ವಕ್ತಾರ

 

ರಾಷ್ಟ್ರೀಯ ಪಕ್ಷಗಳ ತಿರಸ್ಕಾರ ಆರಂಭ

ಚರಿತ್ರೆಯನ್ನು ಮರೆಯಲಾಗದು. 1952 ಮತ್ತು 1957ರ ಚುನಾವಣೆಯ ನಂತರ ಪ್ರಾದೇಶಿಕ ಪಕ್ಷಗಳು ಬಲಗೊಂಡವು. ಜವಾಹರ್‌ ಲಾಲ್‌ ನೆಹರೂ ಅವರ ವೈಭವೀಕರಿಸಲ್ಪಟ್ಟ ವ್ಯಕ್ತಿತ್ವದ ಕಾರಣದಿಂದ ಕಾಂಗ್ರೆಸ್‌ ಸತತವಾಗಿ ಚುನಾವಣೆಗಳಲ್ಲಿ ಗೆಲ್ಲುತ್ತಿತ್ತು. 1962ರ ನಂತರದ ದಿನಗಳಲ್ಲಿ ನೆಹರೂ ಅವರ ವ್ಯಕ್ತಿತ್ವದ ಭಾರಕ್ಕೆ ಕಾಂಗ್ರೆಸ್‌ ಕುಸಿಯಿತು. ಪ್ರಾದೇಶಿಕ ಪಕ್ಷಗಳು ಮಂಚೂಣಿಗೆ ಬಂದಿದ್ದವು. ಸಮಾಜವಾದಿ ಮತ್ತು ಎಡ ಪಕ್ಷಗಳ ಸಣ್ಣ ಘಟಕಗಳಾಗಿ ಇದ್ದವು. ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿರುವುದೇ ಪ್ರಾದೇಶಿಕ ಪಕ್ಷಗಳು. ಐದು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸುವಾಗ ಪ್ರಾದೇಶಿಕ ಪಕ್ಷಗಳು ಆಗಾಗ ಕಾಣಿಸಿಕೊಂಡು ಮರೆಯಾಗುತ್ತವೆ ಎಂದು ಭಾವಿಸುವುದು ಸರಿಯಲ್ಲ. ಭಾರತ ರಾಜ್ಯಗಳ ಒಕ್ಕೂಟ ಎಂದು ನಮ್ಮ ಸಂವಿಧಾನವೇ ಸ್ಪಷ್ಟವಾಗಿ ಹೇಳಿದೆ.

ಪ್ರಾದೇಶಿಕ ಪಕ್ಷಗಳು ಯಾವತ್ತೂ ರಾಷ್ಟ್ರೀಯತೆ, ಪ್ರಾದೇಶಿಕ ಅಸ್ಮಿತೆ, ಸಾಮಾಜಿಕ ನ್ಯಾಯದ ವಿಚಾರವನ್ನು ಮುಂದಿಟ್ಟುಕೊಂಡೇ ಕೆಲಸ ಮಾಡುತ್ತವೆ. ರಾಷ್ಟ್ರೀಯ ಪಕ್ಷಗಳು ಮಾತ್ರ ಎಲ್ಲವನ್ನೂ ಸಮಾನವಾಗಿ ಕಾಣುತ್ತವೆ ಎಂಬುದು ಸರಿಯಲ್ಲ. ಪ್ರಾದೇಶಿಕ ಪಕ್ಷಗಳು ಕೂಡ ದೇಶವನ್ನು ಮುನ್ನಡೆಸಿವೆ. ಈ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಜನರು ತಿರಸ್ಕರಿಸಿರುವುದು ಸ್ಪಷ್ಟವಾಗಿದೆ. ಒಂದು ದೇಶ ಒಬ್ಬನೇ ವ್ಯಕ್ತಿ ಎಂಬಲ್ಲಿಗೆ ಪ್ರಧಾನಿ ಮುಂದುವರಿದರು. ಪ್ರಾದೇಶಿಕ ಪಕ್ಷಗಳನ್ನು ಕೊಲ್ಲುವ ರಾಷ್ಟ್ರೀಯ ಪಕ್ಷಗಳ ಹುನ್ನಾರವನ್ನು ಜನರು ಗಮನಿಸುತ್ತಿದ್ದಾರೆ.

ಬಲಿಷ್ಠ ಪ್ರಾದೇಶಿಕ ಪಕ್ಷ ಇದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧ ಆರೋಗ್ಯಕರವಾಗಿ ಇರುತ್ತದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಕೊಲ್ಲುವ ಪ್ರಯತ್ನ ಮಾಡುತ್ತದೆ. ಪ್ರಾದೇಶಿಕ ನಾಯಕತ್ವವನ್ನೂ ಮಣಿಸುತ್ತವೆ. ಡಿ. ದೇವರಾಜ ಅರಸು ಇದಕ್ಕೊಂದು ಉದಾಹರಣೆ. ದೇಶದಲ್ಲಿ ಮತ್ತೊಮ್ಮೆ ಪ್ರಾದೇಶಿಕ ಪಕ್ಷಗಳ ಸರ್ಕಾರ ಖಚಿತ

 ವೈ.ಎಸ್‌.ವಿ. ದತ್ತ, ಜೆಡಿಎಸ್‌ ಮುಖಂಡರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು